ಮದ್ದೂರು ಕ್ಷೇತ್ರದಲ್ಲೂ ಮತದಾನ ಶಾಂತಿಯುತ

ಬೆಳಿಗ್ಗಿನಿಂದಲೇ ಮತದಾನ ಮದ್ದೂರು ಸೇರಿ ಆತಗೂರು ಹೋಬಳಿ, ಕಸಬಾ, ಸಿ.ಎ.ಕೆರೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಸೇರಿದಂತೆ ಮತದಾರರು ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

KannadaprabhaNewsNetwork | Published : Apr 27, 2024 7:48 PM IST

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಕ್ಷೇತ್ರದಲ್ಲಿ ಶುಕ್ರವಾರ ಸಣ್ಣಪುಟ್ಟ ಗಲಾಟೆ ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನಕ್ಕೆ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು.

ಸಂಸದೆ ಸುಮಲತಾ ದೊಡ್ಡರಸಿನಕೆರೆಯಲ್ಲಿ, ಶಾಸಕ ಕೆ.ಎಂ.ಉದಯ್ ಸ್ವಗ್ರಾಮ ಕದಲೂರಿನಲ್ಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಸ್ವಗ್ರಾಮ ಕೆ.ಹೊನ್ನಲಗೆರೆಯಲ್ಲಿ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಮದ್ದೂರಿನ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಮತದಾನ ಮಾಡಿದರು.

ಬೆಳಿಗ್ಗಿನಿಂದಲೇ ಮತದಾನ ಮದ್ದೂರು ಸೇರಿ ಆತಗೂರು ಹೋಬಳಿ, ಕಸಬಾ, ಸಿ.ಎ.ಕೆರೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಸೇರಿದಂತೆ ಮತದಾರರು ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ತಾಲೂಕಿನ ವೈದ್ಯನಾಥಪುರದ ಮತಗಟ್ಟೆಯ ಆವರಣದಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆಂಬ ಕಾರಣಕ್ಕೆ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿಯನ್ನು ತಿಳಿಗೊಳಿಸಿದರು.

ತಾಲೂಕಿನ ಬೆಸಗರಹಳ್ಳಿಯ ಪಣ್ಣೆದೊಡ್ಡಿ ಗ್ರಾಮದ ಮತಗಟ್ಟೆಯ ಬಳಿ ಸೇರಿದ್ದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರನ್ನು ಹೊರಗೆ ಕಳುಹಿಸುವ ವಿಚಾರದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂಣತಕ್ಕೆ ತಲುಪಿತು. ಇದರಿಂದಾಗಿ ಕೆಲಕಾಲಾ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪಣ್ಣೆದೊಡ್ಡಿ ಮತಗಟ್ಟೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಗುಂಪೊಂದು ಮತಯಾಚನೆ ಮಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಧಾವಿಸಿದ ಬೆಸಗರಹಳ್ಳಿ ಪಿಎಸ್ಐ ಮಲ್ಲಪ್ಪ ಕಂಬಾರ ಮತಗಟ್ಟೆ ಗಡಿರೇಖೆಯೊಳಗೆ ಮತಯಾಚನೆ ಮಾಡಬಾರದು, ಎಲ್ಲರೂ ಹೊರ ಹೋಗುವಂತೆ ತಾಕೀತು ಮಾಡಿದರು.

ಇದರಿಂದ ರೊಚ್ಚಿಗೆದ್ದ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದು ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ನಂತರ ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ವೆಂಕಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

30 ನಿಮಿಷ ಮತದಾನ ಸ್ಥಗಿತ:

ಪಟ್ಟಣದ ತಾಪಂ ಕಚೇರಿ ಮತಗಟ್ಟೆ 94 ರಲ್ಲಿ ಇವಿಎಂ ಮತಯಂತ್ರ ಕೈಗೆಟ್ಟ ಕಾರಣ ಸುಮಾರು 30 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಇದರಿಂದ ಮತದಾನ ಮಾಡಲು ಮತದಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ವಿಷಯ ತಿಳಿದು ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಬೇರೆ ಮತಯಂತ್ರವನ್ನು ಅಳವಡಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

.

Share this article