ಬಡ ಮಹಿಳೆಯರಿಗೆ ಪ್ರಭಾವಿಯಿಂದ ಲೈಂಗಿಕ ಶೋಷಣೆ: ತನಿಖೆಗೆ ಆಯನೂರು ಆಗ್ರಹ

ಹಾಸನದ ಘಟನೆಯ ಬಗ್ಗೆ ಇಡೀ ಸಮಾಜವೇ ಮೌನವಾಗಿದೆ. ಇದು ಒಪ್ಪಿತ ಸಂಬಂಧವೇ ಇರಬಹುದು. ಆದರೆ, ಒಪ್ಪಿತ ಸಂಬಂಧದ ದೃಶ್ಯಗಳನ್ನು ನೀಲಿ ಚಿತ್ರ ಮಾಡುವುದು ಎಷ್ಟು ಸರಿ? ಆತನ ವಿರುದ್ಧ ಸ್ವಯಂ ದೂರು ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಒತ್ತಾಯಿಸಿದರು.

KannadaprabhaNewsNetwork | Published : Apr 27, 2024 7:48 PM IST / Updated: Apr 28 2024, 07:52 AM IST

 ಶಿವಮೊಗ್ಗ : ಹಾಸನ ಭಾಗದಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬದ ಪ್ರಭಾವಿ ರಾಜಕಾರಣಿಯೋರ್ವ ನೂರಾರು ಬಡ ಮಹಿಳೆಯರಿಗೆ ಲೈಂಗಿಕ ಶೋಷಣೆ ಮಾಡಿದ ಸುದ್ದಿಗಳು ಹೊರಬರುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂಥದ್ದು ಇದನ್ನು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೇಹಾ ಘಟನೆ ಕೂಡ ಇಡೀ ಸಮಾಜ ತಲೆತಗ್ಗಿಸುವಂಥದ್ದೇ ಆಗಿದೆ. ಹತ್ಯೆ ಮಾಡಿದ ಪಾಪಿಷ್ಠನಿಗೆ ಶಿಕ್ಷೆ ಆಗಲೇಬೇಕು. ಆ ಘಟನೆಯನ್ನು ಮರೆಯುವ ಮುನ್ನವೇ ಹಾಸನ ಭಾಗದಲ್ಲಿ ಪ್ರಭಾವಿ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆ ಎಲ್ಲೆಡೆ ಕೇಳಿಬರುತ್ತಿದೆ. ಖಾಸಗಿ ಚಾನೆಲ್ ಒಂದು ಕೂಡ ಈ ಬಗ್ಗೆ ಬಿತ್ತರಿಸಿದೆ ಎಂದರು.

ಆ ರಾಜಕಾರಣಿಯ ಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದ ಕೂಲಿ ಕೆಲಸದವರು ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೋಲಿಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ. ರಾಜರೋಷವಾಗಿ ಅವರ ಬಟ್ಟೆಗಳನ್ನು ಬಿಚ್ಚಿಸಿದ ದೃಶ್ಯಗಳು ಕಾಣಿಸಿಕೊಳ್ಳತೊಡಗಿವೆ. ಅನ್ಯಾಯಕೊಳಕ್ಕಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಭಯ ಪಡುತ್ತಿದ್ದಾರೆ ಎಂದರು.

ಭಾರತ ಮಾತೆ ಮಕ್ಕಳು ಎಂದು ಹೇಳಿಕೊಳ್ಳುವ ಬಿಜೆಪಿಗರು ಇಂತಹದೊಂದು ಸುದ್ದಿ ಇಡೀ ರಾಜ್ಯದಲ್ಲಿ ಹರಡಿದ್ದರು ಕೂಡ ತುಟಿಪಿಟಿಕ್ ಎನ್ನುತ್ತಿಲ್ಲ. ತಮ್ಮ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಅನ್ಯಾಯಕ್ಕೊಳಗಾದ ಮಹಿಳೆಯರ ಪರ ಮಾತನಾಡಬಾರದೆ? ಶಿವಮೊಗ್ಗದಲ್ಲಿಯೂ ಕೂಡ ಹಿಂದೂ ಹುಲಿ ಎನಿಸಿಕೊಂಡ ಈಶ್ವರಪ್ಪ ಕೂಡ ಸುಮ್ಮನಿದ್ದಾರೆ ಎಂದರು.

ಹಾಸನದ ಘಟನೆಯ ಬಗ್ಗೆ ಇಡೀ ಸಮಾಜವೇ ಮೌನವಾಗಿದೆ. ಇದು ಒಪ್ಪಿತ ಸಂಬಂಧವೇ ಇರಬಹುದು. ಆದರೆ, ಒಪ್ಪಿತ ಸಂಬಂಧದ ದೃಶ್ಯಗಳನ್ನು ನೀಲಿ ಚಿತ್ರ ಮಾಡುವುದು ಎಷ್ಟು ಸರಿ? ಆತನ ವಿರುದ್ಧ ಸ್ವಯಂ ದೂರು ದಾಖಲಿಸಬೇಕು ಎಂದು ಯಾರ ಹೆಸರು ಹೇಳದೆ ಹಾಸನದ ಪ್ರತಿಷ್ಠಿತ ರಾಜಕೀಯ ಕುಟುಂಬದ ವಿರುದ್ಧ ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ.ಶೇಷಾದ್ರಿ ಪ್ರಮುಖರಾದ ಹಿರಣ್ಣಯ್ಯ, ಧೀರರಾಜ್ ಹೊನ್ನಾವಿಲೆ, ಶಿ.ಜು.ಪಾಶ, ಪದ್ಮನಾಭ, ಆಯನೂರು ಸಂತೋಷ್, ಜಗದೀಶ್, ಶಶಿ ಮುಂತಾದವರು ಇದ್ದರು.

Share this article