ಚನ್ನಪಟ್ಟಣ: ಮತದಾನ ಮುಗಿದ ಬಳಿಕ ಕೆಲಕಾಲ ಮತಯಂತ್ರವನ್ನು ಜೀಪಿನಲ್ಲಿ ತೆಗದುಕೊಂಡು ಹೋದ ಮತಗಟ್ಟೆ ಅಧಿಕಾರಿಗಳು ಆತಂಕ ಸೃಷ್ಟಿಸಿದ ಪ್ರಸಂಗ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಸಂಖ್ಯೆ 46ರ ಸಿಬ್ಬಂದಿಗಳು ಪೊಲೀಸರನ್ನು ಕರೆದುಕೊಳ್ಳದೆ ಏಕಾಏಕಿ ಮತಯಂತ್ರವನ್ನು ತೆಗೆದುಕೊಂಡು ಅಲ್ಲಿಂದ ಜೀಪಿನಲ್ಲಿ ಹೊರಟಿದ್ದಾರೆ. ಮತಯಂತ್ರವನ್ನು ಬಸ್ಸಿಗೆ ತಲುಪಿಸದೆ ಜೀಪಿನಲ್ಲಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪ್ರಶ್ನೆಮಾಡಿದಾಗ ಸ್ಥಳೀಯ ಸಿಬ್ಬಂದಿ ಅವರಿಗೆ ಕರೆಮಾಡಿದ್ದಾರೆ ದೂರವಾಣಿ ಕರೆಯನ್ನು ಸ್ವೀಕರಿಸದೇ ಹೋಗಿದ್ದರಿಂದ ಗ್ರಾಮಸ್ಥರು ಮತ್ತಷ್ಟು ಅನುಮಾನ ಗೊಂಡಿದ್ದಾರೆ. ಕೊನೆಗೆ ತಡವಾಗಿ ಗ್ರಾಮದ ಬಸ್‌ಬಳಿಗೆ ಸಿಬ್ಬಂದಿ ಬಂದಿದ್ದಾರೆ ಎನ್ನಲಾಗಿದೆ.
ನಮಗೆ ಈ ಸಿಬ್ಬಂದಿಯ ಮೇಲೆ ಸಂದೇಹವಿದೆ. ಅವರು ಮತಯಂತ್ರವನ್ನು ಯಾಕೆ ತೆಗೆದುಕೊಂಡು ಹೋಗಿದ್ದರು ಎಂದು ಪ್ರಶ್ನಿಸಿದ ಗ್ರಾಮಸ್ಥರು ತಹಸೀಲ್ದಾರ್ ಸ್ಥಳಕ್ಕೆ ಬರುವವರೆಗೆ ನಾವು ಮತಯಂತ್ರವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಬಸ್ ಅಡ್ಡಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಲಘುಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ.ಗ್ರಾಮಕ್ಕೆ ತೆರಳಿದ ತಹಸೀಲ್ದಾರ್ ನರಸಿಂಹಮೂರ್ತಿ ಪೊಲೀಸರ ಸಹಕಾರದಿಂದ ಮತಯಂತ್ರವಿದ್ದ ಬಸ್ ಅನ್ನು ತೆಗೆದುಕೊಂಡು ತೆರಳಿದ್ದಾರೆ.