ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭಾ ವ್ಯಾಪ್ತಿಯ ಕಲುಷಿತ ನೀರು ದೇವಿರಮ್ಮಣ್ಣಿ ಕೆರೆ ಮತ್ತು ಹೊಸಹೊಳಲು ದೊಡ್ಡ ಕೆರೆಗಳಿಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳ ತಂಡ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಪಟ್ಟಣದ ಮಲಯುಕ್ತ ತ್ಯಾಜ್ಯ ನೀರಿನ ವಿಲೇವಾರಿಗಾಗಿ ಒಳಚರಂಡಿ ಮಂಡಳಿ ಪಟ್ಟಣದ ನಾಲ್ಕು ಕಡೆ ತೇವಬಾವಿಗಳನ್ನು ನಿರ್ಮಿಸಿದ್ದರೂ ಅವು ಕಾರ್ಯ ನಿರ್ವಹಿಸದಿರುವ ಪರಿಣಾಮ ಕಲುಷಿತ ನೀರು ಪಟ್ಟಣದ ಜನ ಬಳಕೆ ಮಾಡುವ ದೇವೀರಮ್ಮಣ್ಣಿ ಕೆರೆ ಮತ್ತು ಹೊಸಹೊಳಲು ಕೆರೆ ಸೇರಿ ಜಲ ಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ರಾಜ್ಯ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಈ ಹಿಂದಿನ ಪುರಸಭೆ ಆಡಳಿತ ಮಂಡಳಿ ಒಳಚರಂಡಿ ಮಂಡಳಿಯಿಂದ ಕಾಮಗಾರಿ ಪೂರ್ಣಗೊಂಡಿದೆ ಎಂದು ಹಸ್ತಾಂತರ ಮಾಡಿಕೊಂಡಿದೆ. ಕಳೆದ ಎರಡು ವಿಧಾನಸಭೆ ಅಧಿವೇಶನಗಳಲ್ಲಿಯೂ ಶಾಸಕರು ಈ ವಿಚಾರವಾಗಿ ಚರ್ಚೆ ಮಾಡಿದ್ದರೂ ಕ್ರಮ ಕೈಗೊಂಡಿರಲಿಲ್ಲ.ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಮತ್ತೆ ಪಟ್ಟಣದ ಒಳಚರಂಡಿ ಯೋಜನೆ ವಿಚಾರವನ್ನು ಚರ್ಚೆಗೆ ತಂದ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿಗಳ ತಂಡ ಪಟ್ಟಣಕ್ಕೆ ಆಗಮಿಸಿ ಸಮಸ್ಯೆಗಳ ಪರಿಶೀಲನೆ ನಡೆಸಿತು.
ರಾಜ್ಯ ಒಳಚರಂಡಿ ಇಲಾಖೆ ಯೋಜನೆಯಂತೆ ಪಟ್ಟಣದ ಪಶ್ಚಿಮ ಭಾಗಕ್ಕೆ ಸೇರಿದ ಚನ್ನರಾಯಪಟ್ಟಣ ರಸ್ತೆ ಬಳಿ ಒಂದು ತೇವ ಬಾವಿ, ಉತ್ತರ ಭಾಗದ ಚಿಕ್ಕಹೊಸಹೊಳ್ಳಿ ಬಳಿ ಒಂದು ತೇವ ಬಾವಿ, ಪೂರ್ವ ಭಾಗದ ಕಾಗುಂಡಿ ಹಳ್ಳದ ಬಳಿ ಒಂದು ತೇವ ಬಾವಿ ಹಾಗೂ ದಕ್ಷಿಣ ಭಾಗದ ಹೊಸಹೊಳಲು ಬಳಿ ಒಂದು ತೇವ ಬಾವಿ ಸೇರಿದಂತೆ ಕಲುಷಿತ ನೀರನ್ನು ಪಂಪ್ ಮಾಡಲು ನಾಲ್ಕು ತೇವ ಬಾವಿಗಳನ್ನು ನಿರ್ಮಿಸಬೇಕು. ಆದರೆ, ಜಾಗದ ಕೊರತೆಯಿಂದ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ತೇವ ಬಾವಿಗಳ ನಿರ್ಮಾಣ ಆಗಿಲ್ಲ. ಇದರ ಪರಿಣಾಮ ಈ ಭಾಗದ ಮಲಯುಕ್ತ ಕೊಳಚೆ ನೀರು ಪಟ್ಟಣದ ಐತಿಹಾಸಿಕ ದೇವೀರಮ್ಮಣ್ಣಿ ಕೆರೆ ಸೇರುತ್ತಿದೆ.ಪಟ್ಟಣದ ಪೂರ್ವ ಭಾಗದ ಕಾಗುಂಡಿ ಹಳ್ಳದ ಪಕ್ಕದ ತೇವ ಬಾವಿಗೆ ಕಳೆದ ಒಂದು ವರ್ಷದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಅದು ಕಾರ್ಯನಿರ್ವಹಿಸದ ಪರಿಣಾಮ ಪಟ್ಟಣದ ಕಲುಷಿತ ನೀರು ಹೊಸಹೊಳಲು ದೊಡ್ಡಕೆರೆ ಸೇರುತ್ತಿದೆ. ಇದರಿಂದ ಪಟ್ಟಣದ ಕೆರೆಗಳು ಮಲೀನಗೊಂಡು ಜನ-ಜಾನುವಾರುಗಳ ಬಳಕೆಗೆ ಯೋಗ್ಯವಾಗಿಲ್ಲ.
ಹೊಸಹೊಳಲು ಭಾಗದ ತೇವ ಬಾವಿ ಸಮಸ್ಯೆಯನ್ನು ಪರಿಹರಿಸಿದ್ದು, ಕಳೆದ ಒಂದೆರಡು ದಿನಗಳಿಂದ ಅದು ಕಾರ್ಯರಂಭ ಮಾಡಿದೆ. ಚನ್ನರಾಯಪಟ್ಟಣ ರಸ್ತೆ ಮತ್ತು ಚಿಕ್ಕಹೊಸಹಳ್ಳಿ ಭಾಗದಲ್ಲಿ ತೇವ ಬಾವಿ ನಿರ್ಮಾಣಕ್ಕೆ ಜಾಗದ ಕೊರತೆಯಿದೆ. ಈ ಭಾಗದಲ್ಲಿ ಯಾವುದೇ ಸರ್ಕರಿ ಜಾಗ ಇಲ್ಲದಿರುವ ಪರಿಣಾಮ ರೈತರಿಂದ ಅಗತ್ಯ ಜಾಗವನ್ನು ಕೊಂಡುಕೊಳ್ಳಬೇಕಾಗಿದೆ.ಕಾಗುಂಡಿ ಹಳ್ಳದ ಬಳಿ ತೇವ ಬಾವಿ ಕಾರ್ಯಾರಂಭ ಮಾಡಲು ಒಂದು ಟಿಸಿ ಅಗತ್ಯವಿದೆ. ಆದರೆ, ವಿದ್ಯುತ್ ಇಲಾಖೆ ಇಲ್ಲಿನ ತೇವ ಬಾವಿ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಿಲ್ಲ ಎಂದು ಪುರಸಭೆ ಮುಖ್ಯ ಇಂಜಿನಿಯರ್ ಬಸವೇಗೌಡ ಪರಿಶೀಲನಾ ತಂಡಕ್ಕೆ ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ಯೋಜನೆ ಮುಖ್ಯ ಅಭಿಯಂತರ ವಿ.ಎಲ್. ಚಂದ್ರಪ್ಪ, ಕಾರ್ಯಪಾಲಕ ಅಭಿಯಂತರ ಮಹದೇವ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಾಬುಸಾಬ್ ನಧಾಪ್ ಮತ್ತು ಭಾಗ್ಯ ಪರಿಶೀಲನಾ ತಂಡದಲ್ಲಿದ್ದರು.