ಕನ್ನಡಪ್ರಭ ವಾರ್ತೆ ಪಾವಗಡ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಭಾನುವಾರ ಪಾವಗಡಕ್ಕೆ ಆಗಮಿಸಿ ಸರ್ಕಾರದ ಸೌಲಭ್ಯ ಸದ್ಬಳಿಕೆ ಹಾಗೂ ಕುಂದುಕೊರತೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು.ಬೆಳಿಗ್ಗೆ 11ಗಂಟೆಗೆ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಪಟ್ಟಣದ ಶಿರಾ ರಸ್ತೆಯ ಶ್ರೀನಿವಾಸ ಟಾಕೀಸ್ ಬಳಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಆಹಾರ ಧಾನ್ಯಗಳ ವಿತರಣೆ ಹಾಗೂ ನ್ಯಾಯಬೆಲೆ ಅಂಗಡಿಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಈ ವೇಳೆ ಸರ್ಕಾರದಿಂದ ಪೂರೈಕೆ ಆಗುತ್ತಿರುವ 15ಕೆಜಿ ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳ ವಿತರಣೆ ಕುರಿತು ಪಡಿತರಿಂದ ಮಾಹಿತಿ ಪಡೆದುಕೊಂಡ ಡೀಸಿ, ಸರ್ಕಾರದಿಂದ ಪಡಿತರ ಚೀಟಿಗಳಿಗೆ ಪೂರೈಕೆ ಅಗುವ ಆಹಾರ ಧಾನ್ಯಗಳು ಸಮರ್ಪಕವಾಗಿ ವಿತರಣೆ ಆಗಬೇಕು. ಕಾರ್ಡ್‌ದಾರರಿಗೆ ಸರ್ಕಾರ ನಿಗದಿಪಡಿಸಿದ್ದ ಅಕ್ಕಿ ರಾಗಿ ಇತರೆ ಆಹಾರ ಧಾನ್ಯಗಳು ಪಡಿತರರಿಗೆ ಸಿಗಬೇಕು. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಪಡಿತರ ಚೀಟಿದಾರರ ದೂರಿನ ಮೇರೆಗೆ ಆಹಾರ ಧಾನ್ಯಗಳ ವಿತರಣೆಯ ಸೊಸೈಟಿ ಮಾಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದಾಗಿ ಎಚ್ಚರಿಸಿದರು.ಸರ್ಕಾರದಿಂದ ಇಲ್ಲಿನ ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳ ವಿವರ ಹಾಗೂ ಪಡಿತರ ಚೀಟಿದಾರರ ಸಂಖ್ಯೆ ಕುರಿತು ತಹಸೀಲ್ದಾರ್ ಹಾಗೂ ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ರಾಮಕೃಷ್ಣ ಅವರಿಂದ ಮಾಹಿತಿ ಪಡೆದ ಬಳಿಕ ಸರ್ವರ್ ಸಮಸ್ಯೆ ನೆಪ ಹೇಳಿ ವಿತರಣಾ ಕೇಂದ್ರಗಳಲ್ಲಿ ಆಹಾರ ಧಾನ್ಯಗಳ ವಿತರಣೆ ವಿಳಂಬ ಮಾಡಬಾರದು. ವಿತರಣೆ ಸಂದರ್ಭದಲ್ಲಿ ಪ್ರತಿ ದಿನ ಒಂದು ಗಂಟೆ ಮುಂಚಿತವಾಗಿ ನ್ಯಾಯಬೆಲೆ ಅಂಗಡಿಗಳ ಕೇಂದ್ರಗಳನ್ನು ತೆರೆದು ಆಹಾರ ಧಾನ್ಯ ವಿತರಿಸುವ ಮೂಲಕ ಪಡಿತರ ಚೀಟಿದಾರರಿಗೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿಗೆ ಆದೇಶಿಸಿದರು.