ಕಲುಷಿತ ನೀರು ನಾಲೆಗೆ: ಬಳ್ಳಾರಿಯ 36 ಜೀನ್ಸ್‌ ಯೂನಿಟ್‌ಗಳಿಗೆ ಬೀಗ

KannadaprabhaNewsNetwork |  
Published : Nov 19, 2025, 01:15 AM IST
ಬಳ್ಳಾರಿ ಜೀನ್ಸ್ ಘಟಕದ ಒಂದು ನೋಟ (ಸಂಗ್ರಹ ಚಿತ್ರ)  | Kannada Prabha

ಸಾರಾಂಶ

ಕಲುಷಿತ ನೀರು ನಾಲೆಗೆ ಹರಿಸುವ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 36 ವಾಷಿಂಗ್ ಯೂನಿಟ್‌ಗಳ ಬಂದ್‌ಗೆ ನೊಟೀಸ್ ನೀಡಲಾಗಿದೆ.

ಬಳ್ಳಾರಿ: ಜೀನ್ಸ್‌ ವಾಷಿಂಗ್‌ ಯುನಿಟ್‌ಗಳ ಕಲುಷಿತ ನೀರು ನಾಲೆಗೆ ಹರಿಸುವ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 36 ವಾಷಿಂಗ್ ಯೂನಿಟ್‌ಗಳ ಬಂದ್‌ಗೆ ನೊಟೀಸ್ ನೀಡಿದ್ದು, ಎಲ್ಲ ಜೀನ್ಸ್‌ ಯೂನಿಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ನಗರದ ಹೊರವಲಯದ ಮುಂಡ್ರಿಗಿ ಪ್ರದೇಶದಲ್ಲಿ ಕೊರೋನಾ ಮುನ್ನ 83 ಜಿನ್ಸ್‌ ವಾಷಿಂಗ್‌ ಘಟಕಗಳು ಚಾಲ್ತಿಯಲ್ಲಿದ್ದವು. ಆನಂತರ ಕೊರೋನಾ ಹೊಡೆತಕ್ಕೆ, ನಾನಾ ಸಮಸ್ಯೆಗಳಿಂದ ಏಕಾಏಕಿ 30 ಅಧಿಕ ಘಟಕಗಳು ಬಂದ್‌ ಆಗಿವೆ. ಸದ್ಯ ಸುಮಾರು 50 ವಾಷಿಂಗ್‌ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಹಲವು ಘಟಕಗಳು ನಾನಾ ಸಮಸ್ಯೆಗಳನ್ನು ಎದುರಿಸಿದರೆ, ಇನ್ನುಳಿದ ಘಟಕಗಳ ಪೈಕಿ 36 ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡುತ್ತಿದ್ದಂತೆಯೇ ಬೀಗ ಹಾಕಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಉದ್ದೇಶದೊಂದಿಗೆ ಘೋಷಿಸಿರುವ ಜೀನ್ಸ್‌ ಅಪರಲ್‌ ಪಾರ್ಕ್‌ ಸ್ಥಾಪನೆಯ ಎದುರು ನೋಡುತ್ತಿರುವ ಹೊತ್ತಿನಲ್ಲಿಯೇ ಈಗ ಉದ್ಯಮಕ್ಕೆ ಜೀವಾಳವಾಗಿರುವ ವಾಷಿಂಗ್‌ ಯುನಿಟ್‌ಗಳ ಸಂಪೂರ್ಣ ಬಂದ್‌ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿರುವುದು ಜೀನ್ಸ್‌ ಉದ್ಯಮಕ್ಕೆ ಮತ್ತಷ್ಟು ಆಘಾತ ನೀಡಿದೆ.

500ಕ್ಕೂ ಅಧಿಕ ಜೀನ್ಸ್‌ ಸಿದ್ಧ ಉಡುಪು ತಯಾರಿಕೆ ಘಟಕಗಳಿದ್ದು, ಪ್ರತ್ಯೇಕ್ಷ, ಪರೋಕ್ಷವಾಗಿ ಒಂದು ಲಕ್ಷಕ್ಕೂ ಅಧಿಕ ಜನತೆ ಜೀನ್ಸ್‌ ಉಡುಪು ತಯಾರಿಕಾ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ತಯಾರಾಗುವ ಜೀನ್ಸ್‌ ಉಡುಪುಗಳು ರಾಜ್ಯ ಸೇರಿ ದೇಶ, ವಿದೇಶಗಳಲ್ಲೂ ಗಮನ ಸೆಳೆದಿವೆ. ಕೋಟ್ಯಂತರ ರುಪಾಯಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಉಡುಪುಗಳು ತಯಾರಾಗುತ್ತಿದ್ದು, ಹಬ್ಬಗಳ ಸಂದರ್ಭದಲ್ಲಿ ಉತ್ಪಾದನೆ ದ್ವಿಗುಣವಾಗಲಿದೆ. ವಿದ್ಯುತ್‌ ಸಮಸ್ಯೆ, ನೀರಿನ ಕೊರತೆ, ಕಾರ್ಮಿಕರ ಅಭಾವ, ಉದ್ಯಮಕ್ಕೆ ಪ್ರೋತ್ಸಾಹ ಸಮಸ್ಯೆ ಸೇರಿ ನಾನಾ ಸವಾಲುಗಳ ನಡುವೆಯೇ ಸಾಗುತ್ತಿರುವ ಉದ್ಯಮಕ್ಕೆ ಈಗ ಜೀನ್ಸ್‌ ಉದ್ಯಮಕ್ಕೆ ಜೀವಾಳವಾಗಿರುವ ಜೀನ್ಸ್‌ ವಾಷಿಂಗ್‌ ಯುನಿಟ್‌ಗಳ ಬಂದ್‌ಗೆ ಮುಂದಾಗಿರುವುದು ಜೀನ್ಸ್‌ ಉದ್ಯಮ ಸಂಪೂರ್ಣವಾಗಿ ನೆಲಕಚ್ಚುವ ಭೀತಿ ಎದುರಾಗಿದೆ. ತೀವ್ರ ಆತಂಕ

ಮಾಲಿನ್ಯ ನಿಯಂತ್ರ ಮಂಡಳಿ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಜೀನ್ಸ್ ಘಟಕಗಳು ಬಂದ್ ಆಗಿವೆ. ಹಬ್ಬದ ಮುನ್ನ ಮಂಡಳಿ ಈ ರೀತಿಯ ಕ್ರಮ ಕೈಗೊಂಡಿರುವುದು ತೀವ್ರ ಆತಂಕ ಮೂಡಿದೆ. ಸರ್ಕಾರ ಒಂದಷ್ಟು ಸಮಯ ಅವಕಾಶ ನೀಡಬೇಕು. ನಿಯಮ ಅಳವಡಿಸಿಕೊಂಡ ಘಟಕಗಳಿಗೆ ಮತ್ತೆ ಕಾರ್ಯಾರಂಭಕ್ಕೆ ಕ್ರಮ ವಹಿಸಬೇಕು ಎಂದು ಜೀನ್ಸ್ ಉದ್ಯಮಿ ಪೋಲ್ಯಾಕ್ಸ್ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.

PREV

Recommended Stories

ಯುವಜನತೆ ತಂಬಾಕು ಸೇವನೆಯಿಂದ ದೂರವಿರಿ
ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ: ಬಸವರಾಜ ಹೊರಟ್ಟಿ