ಮುಂಡರಗಿ: ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಸ್ವಾವಲಂಬಿ ಜೀವನಕ್ಕೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್. ಪಾಟೀಲ ತಿಳಿಸಿದರು.
ಮಂಗಳವಾರ ಪಟ್ಟಣದ ಕೆಸಿಸಿ ಬ್ಯಾಂಕ್ ಸಭಾ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್, ಕೆಸಿಸಿ ಬ್ಯಾಂಕ್, ಕೆಎಂಎಫ್, ಹಾಲು ಉತ್ಪಾದಕರ ಸಹಕಾರ ಸಂಘ ಬೂದಿಹಾಳ ಹಾಗೂ ಮುಂಡರಗಿ ತಾಲೂಕಿನ ಎಲ್ಲ ಸಹಕಾರ ಸಂಘ, ಸಹಕಾರ ಬ್ಯಾಂಕುಗಳ ಆಶ್ರಯದಲ್ಲಿ ಜರುಗಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತವು ಅಮೃತ ಕಾಲದತ್ತ ಸಾಗುತ್ತಿದೆ. ಸಹಕಾರಿ ಚಳವಳಿಯು ಯುವಕರು, ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು, ವಿಶೇಷವಾಗಿ ಹೈನುಗಾರಿಕೆ, ಕರಕುಶಲ ವಸ್ತುಗಳು, ಕೈಮಗ್ಗಗಳು, ಕಾರ್ಮಿಕರು ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ತೊಡಗಿರುವವರನ್ನು ಸಬಲೀಕರಣಗೊಳಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಲು ಸಜ್ಜಾಗಿದೆ. ಗ್ರಾಮೀಣ ಮಹಿಳೆಯರು ನಮ್ಮ ತಾಲೂಕಿನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಭಾರತದ ಗ್ರಾಮೀಣ ಮತ್ತು ಅನೌಪಚಾರಿಕ ಆರ್ಥಿಕತೆಯ ಬೆನ್ನೆಲುಬಾಗಿವೆ. ಸಹಕಾರಿ ಉದ್ಯಮಶೀಲತೆಯು ಅವರಿಗೆ ಸಾಮೂಹಿಕ ಉದ್ಯಮದ ಮೂಲಕ ಸಬಲೀಕರಣ, ಆರ್ಥಿಕ ಸ್ವಾತಂತ್ರ್ಯ ಮತ್ತು ಘನತೆಗೆ ಮಾರ್ಗವನ್ನು ನೀಡುತ್ತದೆ. ಸಹಕಾರಿ ಉದ್ಯಮಶೀಲತೆಯು ಆರ್ಥಿಕ ದಕ್ಷತೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುವ, ಜನರನ್ನು ಉದ್ಯಮ ಸೃಷ್ಟಿಯ ಕೇಂದ್ರದಲ್ಲಿ ಇರಿಸುವ ವ್ಯವಹಾರಕ್ಕೆ ವಿಶಿಷ್ಟ ವಿಧಾನವನ್ನು ಪ್ರತಿನಿಧಿಸುತ್ತದೆ. ಇದು ಸದಸ್ಯರ ಮಾಲೀಕತ್ವ, ಪ್ರಜಾಸತ್ತಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ, ಸಮಾನ ಲಾಭ ವಿತರಣೆ ಮತ್ತು ಹಂಚಿಕೆಯ ಬೆಳವಣಿಗೆಗೆ ಒತ್ತು ನೀಡುತ್ತದೆ ಎಂದರು.ಮುಂಡರಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಿಯರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಸಿ. ಪಟ್ಟೇದ ಮಾತನಾಡಿ, ನಮ್ಮ ಸಂಘವು ಅತಿ ಕಡಿಮೆ ಮೂಲ ಬಂಡವಾಳದಿಂದ ಪ್ರಾರಂಭಗೊಂಡಿತು. ವಿಶೇಷವಾಗಿ ನಮ್ಮ ಸಂಘದ ಆಡಳಿತ ಮಂಡಳಿಯವರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಂಘಗಳಿಗೆ ಭೇಟಿ ನೀಡಿ ಅವರ ಉತ್ತಮ ಕಾರ್ಯವನ್ನು ಅವಲೋಕಿಸಿ ಅದನ್ನು ನಮ್ಮ ಸಂಘದಲ್ಲಿ ಅಳವಡಿಸಿ ಸದಸ್ಯರ ಅವಶ್ಯಕತೆಗಣುಗುಣವಾಗಿ ಪ್ರಾಮಾಣಿಕವಾಗಿ ಪೂರಕ ದಾಖಲೆಗಳೊಂದಿಗೆ ಸಾಲ ನೀಡುತ್ತಿದ್ದು, ಅಷ್ಟೇ ಪ್ರಾಮಾಣಿಕವಾಗಿ ಸದಸ್ಯರು ಪ್ರತಿ ತಿಂಗಳು ಪಾವತಿಸುತ್ತಿರುವುದರಿಂದ ಸಂಘವು ಹೆಚ್ಚು ಲಾಭ ಗಳಿಸುತ್ತಿದೆ ಎಂದರು.
ಬೂದಿಹಾಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸಹಕಾರಿ ವಲಯವು ವಿಶ್ವದ ಅತಿದೊಡ್ಡ ಸಹಕಾರಿ ವಲಯಗಳಲ್ಲಿ ಒಂದಾಗಿದೆ. ಇದು 30 ವಲಯಗಳಲ್ಲಿ 32 ಕೊಟಿಗೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ 8,45,475 ಸಹಕಾರಿ ಸಂಸ್ಥೆಗಳನ್ನು ಒಳಗೊಂಡಿದೆ ಎಂದರು.ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ತಿಪ್ಪಣ್ಣ ಭಜಮ್ಮನವರ ಅವರು ಸಹಕಾರಿ ಪಿತಾಮಹ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಕಾರ್ಯಕ್ರಮದಲ್ಲಿ ಯಂಕಪ್ಪ ಹುಳಕಣ್ಣವರ, ಎ.ಎಂ. ಖಟವಟೆ, ವಿ.ಬಿ. ಚಿಕ್ಕನಗೌಡ್ರ, ಕೆ.ಬಿ. ದೊಡ್ಡಮನಿ, ಡಾ. ಪ್ರಸನ್ನ ಪಟ್ಟೇದ, ಸಿ.ಎಸ್. ಕಲ್ಲನಗೌಡರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಎಂ.ಬಿ. ಮಡಿವಾಳರ ಉಪನ್ಯಾಸ ನೀಡಿದರು. ಎಸ್.ವಿ. ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿ, ವಂದಿಸಿದರು.