ಕೆಆರೆಸ್‌ ನೀರು ನಿಲ್ಸಿ ಬ್ಲಫ್‌ನಲ್ಲಿ ಬಿದ್ದಿದ್ದ ಆನೆ ರಕ್ಷಣೆ

KannadaprabhaNewsNetwork |  
Published : Nov 19, 2025, 01:00 AM IST
 ಆನೆ ರಕ್ಷಣೆ | Kannada Prabha

ಸಾರಾಂಶ

ನೀರು ಕುಡಿಯಲು ಶಿವನಸಮುದ್ರ (ಬ್ಲಫ್) ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಇಳಿದು ಹೊರ ಬರಲಾಗದೆ ಸಿಲುಕಿದ್ದ ಗಂಡು ಮರಿಯಾನೆಯನ್ನು ಸತತ 3 ದಿನಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಮೇಲೆತ್ತಿ ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನೀರು ಕುಡಿಯಲು ಶಿವನಸಮುದ್ರ (ಬ್ಲಫ್) ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಇಳಿದು ಹೊರ ಬರಲಾಗದೆ ಸಿಲುಕಿದ್ದ ಗಂಡು ಮರಿಯಾನೆಯನ್ನು ಸತತ 3 ದಿನಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಮೇಲೆತ್ತಿ ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಶನಿವಾರ 10ರಿಂದ 12 ವರ್ಷದ ಕಾಡಾನೆ ನೀರು ಕುಡಿಯಲು ಪಯನೀರ್ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್(ಕಾಲುವೆ)ಗೆ ಇಳಿದಾಗ ನೀರಿನ ರಭಸಕ್ಕೆ ಕೆನಾಲ್ ಒಳಗೆ ಸಿಲುಕಿಕೊಂಡಿತ್ತು. ಆನೆ ಬಂದ ದಾರಿಯಲ್ಲೇ ವಾಪಸ್ ಆಗಬಹುದು ಅಂತ ಒಂದು ದಿನ ಕಾದರೂ ಆನೆ ವಾಪಸ್ ತೆರಳದಿದ್ದಾಗ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸೋಮವಾರ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿ ಮೊದಲಿಗೆ ನಾಲೆಯಲ್ಲಿನ ನೀರಿನ ಪ್ರಮಾಣ ತಗ್ಗಿಸಿದರು. ಕ್ರೇನ್‌ ಬಳಸಿ ಸೋಮವಾರ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಸುಮಾರು 150 ರಿಂದ 200 ಮೀಟರ್ ಅಂತರದಲ್ಲಿಯೇ ಆನೆ ಓಡಾಟ ನಡೆಸುತ್ತಿತ್ತು. ಆನೆ ಸುರಕ್ಷತೆಗಾಗಿ ಕೆಆರ್‌ಎಸ್‌ ಹಾಗೂ ಕಬಿನಿ ಡ್ಯಾಂಗಳಿಂದ ನೀರಿನ ಹರಿವನ್ನು ತಗ್ಗಿಸಲಾಗಿತ್ತು. ಜೊತೆಗೆ ಆನೆಗೆ ಅಗತ್ಯ ಆಹಾರ ಪೂರೈಸಲಾಗುತ್ತಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು, ಸಿಬ್ಬಂದಿ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿ ಕಂಟೇನರ್ ಸಹಾಯದ ಮೂಲಕ ಅನೆಯನ್ನು ಮೇಲೆತ್ತಿದರು.

ಆನೆ 4 ದಿನ ನೀರಿನಲ್ಲಿದ್ದ ಕಾರಣ ಸೊಂಡಿಲು ಹಾಗೂ ಕಾಲುಗಳಲ್ಲಿ ಸೋಂಕು ತಗುಲಿತ್ತು. ಹೀಗಾಗಿ ಅರಿಶಿನ ಹಾಗೂ ನೀಲಗಿರಿ ತೈಲದ ಲೇಪನ ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಆನೆಗೆ ಸಹಜ ಸ್ಥಿತಿಗೆ ಬರುವಂತೆ ಚುಚ್ಚುಮದ್ದು ನೀಡಿ ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.ಆನೆ ಮೇಲೆ 1 ತಿಂಗಳು ನಿಗಾ:

ನಿರಂತರವಾಗಿ ನೀರಿನಲ್ಲಿ ಇದ್ದ ಕಾರಣ ಆನೆ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಅದರ ಸೊಂಡಿಲಿನ ತುದಿ ಬಿಳಿ ಬಣ್ಣಕ್ಕೆ ತಿರುಗಿದೆ. ಕಾಲಿಗೆ ಫಂಗಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಆನೆಗೆ ಚಿಕಿತ್ಸೆ ನೀಡಿದ್ದು, ಯಾವುದೇ ತೊಂದರೆ ಇಲ್ಲ. ಒಂದು ತಿಂಗಳು ಡ್ರೋನ್ ಮೂಲಕ ಆನೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು ಎಂದು ಡಾ। ರಮೇಶ್ ತಿಳಿಸಿದ್ದಾರೆ.

PREV

Recommended Stories

20 ವರ್ಷದಲ್ಲಿ ಆಗದ ರಸ್ತೆ 20 ದಿನದಲ್ಲೇ ಆಯಿತು
ಪಾರಿವಾಳ ಗುಟ್ಟದಲ್ಲಿ ಕಡಲೇಕಾಯಿ ಪರಿಷೆ