ಕನ್ನಡಪ್ರಭ ವಾರ್ತೆ ತುರುವೇಕೆರೆ
20 ವರ್ಷಗಳಿಂದ ಉತ್ತಮ ರಸ್ತೆ ಇಲ್ಲದೇ ಪರದಾಡುತ್ತಿದ್ದ ಯರದೇಹಳ್ಳಿಯ ಸ್ಥಿತಿಗೆ ಮರುಗಿದ ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರೇಶ್ 600 ಮೀ ರಸ್ತೆ ಹಾಗೂ ಅಕ್ಕಪಕ್ಕದ 600 ಮೀ ಚರಂಡಿಯನ್ನು ನಿರ್ಮಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ತಾಲೂಕಿನ ಯರದೇಹಳ್ಳಿ ಗ್ರಾಮದ ಜನರು ಉತ್ತಮವಾದ ರಸ್ತೆ ಕಂಡು ಸುಮಾರು ಇಪ್ಪತ್ತು ವರ್ಷಗಳೇ ಸಂದಿದೆ ಎಂದರೂ ಆಶ್ಚರ್ಯವಿಲ್ಲ. ತಮ್ಮ ಗ್ರಾಮದ ರಸ್ತೆಗಳನ್ನು ಸರಿಪಡಿಸಿಕೊಡಿ ಎಂದು ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ, ಶಾಸಕರು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಹಲವಾರು ಮಂತ್ರಿ ಮಹೋದಯರಿಗೆ ಮನವಿ ಮಾಡಿದ್ದ ಪತ್ರಗಳಿಗೆ ಲೆಕ್ಕವಿಲ್ಲ. ಆದರೂ ಸಹ ಅವರ್ಯಾರಿಗೂ ಆ ಗ್ರಾಮದ ರಸ್ತೆಯನ್ನು ಸರಿಪಡಿಸುವ ಮನಸ್ಸು ಬರಲಿಲ್ಲ. ಯಾವುದೋ ಕಾರಣ ನಿಮ್ಮಿತ್ತ ತಾಲೂಕಿನ ಯರದೇಹಳ್ಳಿಗೆ ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಚಂದ್ರೇಶ್ ಭೇಟಿ ಇತ್ತಿದ್ದರು. ಆ ವೇಳೆ ಗ್ರಾಮದ ಒಂದೆರೆಡು ರಸ್ತೆಯ ಸ್ಥಿತಿ ಅಯೋಮಯವಾಗಿತ್ತು. ನಡೆದು ಬರಲೂ ಆಗದ ಸ್ಥಿತಿ ಇತ್ತು. ಚರಂಡಿಯ ನೀರು ಹೋಗದೇ ರಸ್ತೆಯ ಮೇಲೇ ಹರಿಯುತ್ತಿತ್ತು. ನೀರಿನ ಹರಿವು ಇದ್ದುದರಿಂದ ಗಿಡಗಂಟೆಗಳು ಬೆಳೆದು ವಿಷಜಂತುಗಳ ಆವಾಸ್ಥಾನವಾಗಿತ್ತು. ಪ್ರತಿದಿನ ಜೀವಭಯದಲ್ಲಿ ಬದುಕಬೇಕಿತ್ತು.
ಈ ವೇಳೆ ಗ್ರಾಮದ ಹಲವಾರು ಯುವಕರು ಮತ್ತು ವಯೋವೃದ್ಧರು ತಮ್ಮ ಗ್ರಾಮದ ದುಃಸ್ಥಿತಿಯ ಬಗ್ಗೆ ತಿಳಿಸಿ ಸ್ಥಳದ ದರ್ಶನ ಮಾಡಿಸಿದರು.ಇದನ್ನು ಕಂಡ ದೊಡ್ಡಾಘಟ್ಟ ಚಂದ್ರೇಶ್ ತಾವು ಗ್ರಾಮದ ಎರಡು ರಸ್ತೆಗಳನ್ನು ತಮ್ಮ ಸ್ವಂತ ಖರ್ಚಿನಿಂದ ಸಿಮೆಂಟ್ ರಸ್ತೆ ಮತ್ತು ಚರಂಡಿ ಮಾಡಿಸಿಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ದೊಡ್ಡಾಘಟ್ಟ ಚಂದ್ರೇಶ್ ಸುಮಾರು 600 ಮೀಟರ್ ನಷ್ಟು ಸಿಮೆಂಟ್ ರಸ್ತೆ ಮತ್ತು ರಸ್ತೆಯ ಅಕ್ಕಪಕ್ಕ ಚರಂಡಿ ಕಾಮಗಾರಿಯನ್ನು ಕೇವಲ 20 ದಿನದಲ್ಲೇ ಮಾಡಿಸಿದರು. ಕಳೆದ 20 ವರ್ಷಗಳಿಂದ ಆಗದೇ ಇದ್ದ ರಸ್ತೆ ಮತ್ತು ಚರಂಡಿ ಕೇವಲ 20 ದಿನದಲ್ಲೇ ಆಗಿದ್ದು ಆ ಗ್ರಾಮದ ಜನರಲ್ಲಿ ಹರ್ಷ ಮೂಡಿದೆ. ಈ ಕುರಿತು ಗ್ರಾಮದ ಯುವಕ ನವೀನ್ ಮಾತನಾಡಿ, ನಾವು ಕಳೆದ 20 ವರ್ಷಗಳಿಂದ ರಸ್ತೆಗಾಗಿ ಮಾಡಿದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಿತ್ತು. ಆದರೆ ದೊಡ್ಡಾಘಟ್ಟ ಚಂದ್ರೇಶ್ ರವರು ತಮ್ಮ ಗ್ರಾಮಕ್ಕೆ ಬಂದ ದಿನವೇ ನಮ್ಮ ದೈನೇಸಿ ಸ್ಥಿತಿಗೆ ಮರುಗಿ ಬಹಳ ಗಟ್ಟಿಮುಟ್ಟಾದ ಸಿಮೆಂಟ್ ರಸ್ತೆ ಮತ್ತು ಚರಂಡಿಯನ್ನು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ. ಅವರ ಸೇವೆ ನಮ್ಮ ತಾಲೂಕಿಗೇ ಆಗಲಿ ಎಂದು ಹಾರೈಸಿದರು. ಈ ವೇಳೆ ಗ್ರಾಮದ ಮುಖಂಡರಾದ ನಂದೀಶ್, ರಾಜು, ಸುರೇಶ್, ಚಿಕ್ಕರಾಜಣ್ಣ. ನಂಜೇಗೌಡ, ರಾಜಣ್ಣ, ತಾತಯ್ಯ, ಶ್ರೀನಿವಾಸ್, ವೀರಭದ್ರ, ಬೆಟ್ಟೇಗೌಡ ಸೇರಿದಂತೆ ಹಲವರು ದೊಡ್ಡಾಘಟ್ಟ ಚಂದ್ರೇಶ್ ರ ಮಾನವೀಯ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದರು.