Pollution Control Board dragging its feet on closing down toxic factory!
- ಒಂದು ವರ್ಷವಾದರೂ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಮಂಡಳಿ ಹಿಂದೇಟು
- ಕೆಮಿಕಲ್/ಫಾರ್ಮಾ ಕಾರ್ಖಾನೆಗಳಿಂದ ಆಪತ್ತು ಎಂದು ವರದಿ ನೀಡಿದ್ದ ಪರಿಸರ ಇಲಾಖೆ
- ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕೊಳೆಯುತ್ತಿರುವ ವರದಿ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಫಾರ್ಮಾ ಕಂಪನಿಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲ ಹಾಗೂ ಅಪಾಯಕಾರಿ ರಾಸಾಯನಿಕ ತ್ಯಾಜ್ಯದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದ್ದು, ಇಂತಹ ಕಾರ್ಖಾನೆಗಳನ್ನು ತುರ್ತಾಗಿ ಮುಚ್ಚುವಂತೆ ವರ್ಷದ ಹಿಂದೆಯೇ ಪರಿಸರ ಅಧಿಕಾರಿಗಳ ಹಿಂದೆ ಪತ್ರ ಬರೆದಿದೆಯಾದರೂ, ಮುಚ್ಚುವ ಆದೇಶ ನೀಡಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೈಕಟ್ಟಿಕೊಂಡು ಕುಳಿತಿರುವುದು ಅಚ್ಚರಿ ಮೂಡಿಸಿದೆ.
25ಕ್ಕೂ ಹೆಚ್ಚಿರುವ ಇಲ್ಲಿನ ಫಾರ್ಮಾ ಕಾರ್ಖಾನೆಗಳಿಂದ ಪರಿಸರಕ್ಕೆ ಭಾರೀ ಪ್ರಮಾಣದಲ್ಲಿ ಧಕ್ಕೆ ಜೊತೆಗೆ, ಜನ-ಜಲ-ಜೀವ ಸಂಕುಲಕ್ಕೆ ಭಾರಿ ಆತಂಕ ಮೂಡಿಸಿದೆ. ಪರಿಸರ ನಿಯಮಗಳನ್ನು ಪಾಲಿಸದ ಬಹುತೇಕ ಕಾರ್ಖಾನೆಗಳು, ಯದ್ವಾತದ್ವಾ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮೂಲಕ ಈ ಭಾಗದ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷ, 2025 ರ ಮೇ 15 ರಂದು ಐದು ಕಾರ್ಖಾನೆಗಳ ವಿರುದ್ಧ (ಮಾನ್ಸ್‌ಫೀಲ್ಡ್ ಫಾರ್ಮಾ ಪ್ರೈವೇಟ್ ಲಿಮಿಟೆಡ್, ವಿದ್ಗಾಸ್ ಸೈನ್ಸ್ ಆ್ಯಂಡ್ ಟೆಕ್ನಾಲಜೀಸ್ ಪ್ರೈ. ಲಿ., ವಜ್ರಾಕೆಮ್, ಶ್ರಾವಣಿ ಕೆಮಿಕಲ್ಸ್ ಹಾಗೂ ಸಿನ್ನೋವಾ ಇಂಟರ್‌ಮೀಡಿಯೇಟ್ಸ್) ಮುಚ್ಚಲು ಶಿಫಾರಸ್ಸು ಮಾಡಿ, 2025ರ ಜುಲೈ 16 ಹಾಗೂ ಜುಲೈ 17 ರಂದು ಮಂಡಳಿಯ ಬೆಂಗಳೂರು ಕಚೇರಿಗೆ ಕಳುಹಿಸಲಾಗಿದೆ. ಆದರೆ ಈ ಬಗ್ಗೆ ಕಣ್ಣೆತ್ತಿ ನೋಡುತ್ತಿಲ್ಲವೇಕೆ ಎಂದು ಪ್ರಶ್ನಿಸಿರುವ ಕಡೇಚೂರು ಬಚಾವೋ ಹೋರಾಟ ಸಮಿತಿಯ ಮುಖಂಡ ಭೀಮಣ್ಣ, ಮಂಡಳಿಯ ಈ ನಡೆ ಇಲ್ಲಿನ ಸಾರ್ವಜನಿಕರಲ್ಲಿ ಅನುಮಾನಗಳ ಮೂಡಿಸಿದೆ ಅಂತಾರೆ.
ಅಪಾಯಕಾರಿ ಕೆಮಿಕಲ್ ಕಣಗಳಿಂದ ಈ ಭಾಗದಲ್ಲಿನ ಮಣ್ಣು, ಗಾಳಿ ಹಾಗೂ ನೀರು ಎಲ್ಲವೂ ಕಲುಷಿತಗೊಂಡಿವೆ ಎಂದ ಕೃಷಿ ಇಲಾಖೆ, ನೀರು ಸರಬರಾಜು ಇಲಾಖೆ, ಪರಿಸ ಇಲಾಖೆ ಸೇರಿದಂತೆ ಆಡಳಿತ ಇಲ್ಲಿನ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ತಲುಪಿಸಿದೆ.
ಇಂತಹ ಕಂಪನಿಗಳ ವಿರುದ್ಧ ಕಲಬುರಗಿ ಪ್ರಾದೇಶಿಕ ಕಚೇರಿ ವರದಿ ನೀಡಿದ್ದರೂ, ಜನರ ಜೀವಕ್ಕೆ ಮಾರಕವಾಗುವಂತಹ ಇವುಗಳ ವಿರುದ್ಧ ಕಠಿಣ ಕ್ರಮಕ್ಕೆ ಮಂಡಳಿ ಮೌನ ವಹಿಸಿರುವುದು ಶಂಕೆಗಳ ಮೂಡಿಸಿದೆ. ರಾಜಕೀಯ ಪ್ರಭಾವಿಗಳ ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣೆಗಳಲ್ಲಿ ಕೋಟ್ಯಂತರ ರುಪಾಯಿಗಳ ದೇಣಿಗೆ ನೀಡುವ ಕೆಲವು ಕಾರ್ಖಾನೆಗಳ ಒತ್ತಡಕ್ಕೆ ಮಂಡಳಿ ಮಣಿದಿದೆಯೇನೋ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
ಅಷ್ಟೇ ಅಲ್ಲದೆ, ಕಾರ್ಮಿಕರ ಸುರಕ್ಷಾ ನೀತಿಗಳನ್ನು ಗಾಳಿಗೆ ತೂರಿ, ಅಪಾಯಕಾರಿ ಕಾರ್ಯಚಟುವಟಿಕೆಗಳ ನಡೆಸುವ ಕಾರ್ಖಾನೆಗಳಲ್ಲಿ ಅನೇಕ ಕಾರ್ಮಿಕರ ಸಾವು-ನೋವು ಪ್ರಕರಣಗಳು ಮರೆ ಮಾಚುತ್ತಿವೆ. ಕಳೆದ ತಿಂಗಳು ವಿಷಾನಿಲ ಸೇವಿಸಿ ಮೂವರು ಕಾರ್ಮಿಕರು ಉಸಿರು ಚೆಲ್ಲಿದ ಘಟನೆ ನಡೆದಿತ್ತು. ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಾರದಂತೆ ಮಾಡಲಾಗಿದೆ, ದುರ್ಘಟನೆಗಳಲ್ಲಿ ನಡೆದ ಸಾವುಗಳನ್ನು ಹೃದಯಾಘಾತವೆಂದೋ.. ಅಥವಾ ಸಹಜ ಸಾವು ಎಂದೋ ಬಿಂಬಿಸಿ, ಸಾಗಹಾಕಲಾಗುತ್ತಿದೆ ಎಂಬ ಆರೋಪಗಳಿವೆ. ಮೊನ್ನೆಮೊನ್ನೆಯಷ್ಟೇ, ಪರಿಸರ ಸಚಿವ ರಾಮಲಿಂಗಾರೆಡ್ಡಿ ಸಹ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ವಾತಾವರಣ ಬಗ್ಗೆ ಆತಂಕ ವ್ಯಕ್ತಪಡಿಸಿ, ಗಂಭೀರ ಕ್ರಮಕ್ಕೆ ಸೂಚಿಸಿದ್ದರಲ್ಲದೆ, ಅಧಿಕಾರಿಗ ಅಮಾನತಿಗೆ ಶಿಫಾರಸ್ಸು ಮಾಡಿದ್ದರು.
-
2ವೈಡಿಆರ್1 : ಐದು ಕಾರ್ಖಾನೆಗಳ ಮುಚ್ಚುವಿಕೆ ಬಗ್ಗೆ ಶಿಫಾರಸ್ಸು ಪತ್ರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.