100 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪೊನ್ನಣ್ಣ ಚಾಲನೆ

KannadaprabhaNewsNetwork |  
Published : Feb 14, 2026, 03:00 AM IST
 | Kannada Prabha

ಸಾರಾಂಶ

ತಾಲೂಕಿನ ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ತಾಲೂಕಿನ ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಚಾಲನೆ ನೀಡಿದರು.

ಕಾಟಕೇರಿ ಬಳಿಯ ಕಾಸ್ಪಾಡಿ ರಸ್ತೆ, ಭಗವತಿ ದೇವಸ್ಥಾನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಅಪ್ಪೇಂದ್ರೀಯಪ್ಪ ದೇವಸ್ಥಾನ ರಸ್ತೆ ಉದ್ಘಾಟನೆ, ಕಾಟಕೇರಿ ಗೋಳಿಕಟ್ಟೆ ಮುಖ್ಯ ರಸ್ತೆ, ಮದೆನಾಡು ಬೈರೆಟ್ಟಿರ ಜಂಕ್ಷನ್ ರಸ್ತೆ ಮತ್ತು ಮದೆನಾಡು ಮಠದ ಮನೆ ರಸ್ತೆಯನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಉದ್ಘಾಟಿಸಿದರು.

ಬಳಿಕ ಗೋಳಿಕಟ್ಟೆ ಸರ್ಕಾರಿ ಶಾಲೆ ಪರಿಶೀಲಿಸಿದರು, ಕೋಲ್ಪೆ ದೈವಸ್ಥಾನ ರಸ್ತೆ ಉದ್ಘಾಟಿಸಿದರು. ಹಾಗೆಯೇ ದೇಶ್‍ಕೋಡಿ, ಸಾಲಾಪು ರಸ್ತೆ ಭೂಮಿ ಪೂಜೆ ನೆರವೇರಿಸಿದರು. ನಂತರ ಕೋಲ್ಚಾರು ರಸ್ತೆ ಉದ್ಘಾಟನೆ, ಕೆಮ್ಮಾರನ ಶಿರಾಜ್ ರಸ್ತೆ ಉದ್ಘಾಟಿಸಿದರು. ಬಳಿಕ ನೆರಿಯನ ಐನ್‍ಮನೆಗೆ ಭೇಟಿ ನೀಡಿದರು, ಹಾಗೆಯೇ ಈಶ್ವರಪ್ಪ ಮಾದೂರಪ್ಪ ರಸ್ತೆ ಉದ್ಘಾಟಿಸಿದರು.

ಜೋಡುಪಾಲ ಕಿರಿಕಿಲ್ ರಸ್ತೆ ಭೂಮಿಪೂಜೆ, ಅಬ್ಬಿಕೊಲ್ಲಿ ರಸ್ತೆ ಉದ್ಘಾಟಿಸಿದರು. ಕುಡಿಯರ ಕಾಲೋನಿಯಲ್ಲಿ ಕುಂದುಕೊರತೆ ಸಭೆ ನಡೆಸಿದರು. ಕಾಟಕೇರಿ ಕೂರನ ಬಾಣೆ ರಸ್ತೆ ಉದ್ಘಾಟಿಸಿದರು. ತಾಳತ್ತಮನೆ, ಮಂಗಳೂರು-ಭಾಗಮಂಡಲ ಲಿಂಕ್ ರಸ್ತೆ ಉದ್ಘಾಟಿಸಿದರು. ತಾಳತ್ತಮನೆ ದುರ್ಗಾ ಭಗವತಿ ದೇವಸ್ಥಾನ ರಸ್ತೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು, ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರು. ವೆಚ್ಚದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಸುಮಾರು 2,500 ಕಿಮೀ. ರಸ್ತೆ ಅಭಿವೃದ್ಧಿಗೆ ಮುಂದಾಗಲಾಗಿದೆ ಎಂದರು.

ಸರ್ಕಾರ ಅನುದಾನ ಒದಗಿಸಿದೆ:

ಮುಖ್ಯಮಂತ್ರಿಯವರ ರಸ್ತೆ ಅಭಿವೃದ್ಧಿ ಯೋಜನೆಯಡಿ 50 ಕೋಟಿರು., ಜತೆಗೆ ಹೆಚ್ಚುವರಿಯಾಗಿ 30 ಕೋಟಿ ರು. ಹೀಗೆ ರಸ್ತೆ, ಸೇತುವೆ, ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕಕ್ಕೆ ಸಾಕಷ್ಟು ಬೇಡಿಕೆಗಳಿದ್ದು, ಹಂತ ಹಂತವಾಗಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ಕೊಡಗು ಜಿಲ್ಲೆಗೆ ಇನ್ನೂ ಅನುದಾನ ಬರಬೇಕಿದೆ. ಕುಡಿಯುವ ನೀರಿನ ಯೋಜನೆಗಾಗಿ 58 ಕೋಟಿ ರು.. ವಿನಿಯೋಗಿಸಲಾಗುತ್ತಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.

‘ಜಮ್ಮಾ ಬಾಣೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ಪಟ್ಟೆದಾರರ ಭೂಮಿ ಸಂಬಂಧ ಸಮಸ್ಯೆ ಪರಿಹರಿಸಲು ಶ್ರಮಿಸಲಾಗಿದೆ. ಹಿಂದಿನ ಶಾಸಕದ್ವಯರು ಸಹ ಜಮ್ಮಬಾಣೆ ಭೂಮಿ ಸಮಸ್ಯೆ ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಿದ್ದಾರೆ ಎಂದು ನುಡಿದರು.’

ಗ್ರಾ.ಪಂ. ಅಧ್ಯಕ್ಷರಾದ ವಿಮಲಾಕ್ಷಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಕೊಲ್ಯದ ಗಿರೀಶ್, ತಹಸೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಗ್ರಾ.ಪಂ.ಸದಸ್ಯರಾದ ಆಗಸ್ಟಿನ್ ಜಯರಾಜ್, ಸೈಯದ್ ಅಲ್ವಿ, ಸೂರಜ್ ಹೊಸೂರು, ಇಸ್ಮಾಯಿಲ್, ಮಜ್ಜಿಗೆಮನೆ ದೀಪಕ್, ಸ್ಥಳೀಯ ಪ್ರಮುಖರು ಹಾಗೂ ಗ್ರಾ.ಪಂ.ಸದಸ್ಯರು, ಅಧಿಕಾರಿಗಳು ಇತರರು ಇದ್ದರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ:

ಮದೆನಾಡು ಬಳಿಯ ಗೋಳಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರಾದರು.

ಶಾಲೆಯಲ್ಲಿರುವ 6 ಮತ್ತು 7 ನೇ ತರಗತಿಯ ಮೂರು ವಿದ್ಯಾರ್ಥಿಗಳು ಓದುತ್ತಿದ್ದ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ತಿರುವು ಹಾಕಿದ ಶಾಸಕರು, ಭೂಸುಧಾರಣಾ ಕಾಯ್ದೆ ಜಾರಿಗೊಳ್ಳಲು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರಣಕರ್ತರು ಯಾರೂ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಸರ್ಕಾರ ಕಡಿಮೆ ಮಕ್ಕಳಿದ್ದರೂ ಸಹ ಶಾಲೆಯನ್ನು ಮುಚ್ಚದೆ ಮಧ್ಯಾಹ್ನ ಬಿಸಿಯೂಟ ಜೊತೆಗೆ ಸಮವಸ್ತ್ರ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಓದಬೇಕು ಎಂದು ಸಲಹೆ ಮಾಡಿದರು.

ಅಲ್ಲಿದ್ದ ವಿದ್ಯಾರ್ಥಿಗಳ ಜೊತೆ ಬೆರೆತು ಸಂವಿಧಾನದ ಮಹತ್ವ ಮತ್ತು ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಪಾಠ ಮಾಡಿದರು. ವಿದ್ಯಾರ್ಥಿಗಳಾದ ಯಶಸ್ವಿ ಅವರು ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮೆಚ್ಚುಗೆ ಪಡೆದರು. ಆದಿತ್ಯ, ಕಾವ್ಯ ಸಹ ಶಾಸಕರ ಪ್ರಶ್ನೆಗೆ ಉತ್ತರಿಸಿದರು.

ಬಳಿಕ 1, 2, 4 ನೇ ತರಗತಿಯ ಸುಮಾರು 6 ವಿದ್ಯಾರ್ಥಿಗಳಿಗೆ ಕಾಗುಣಿತ, ಒತ್ತಕ್ಷರಗಳು, ವ್ಯಂಜನಗಳು, ಸ್ವರಗಳು, ಅಲ್ಪಪ್ರಾಣ, ಮಹಾಪ್ರಾಣ ಬಗ್ಗೆ ವಿವರಿಸಿ ಗಮನ ಸೆಳೆದರು.

ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ:

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಗೋಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಬೀಳುವ ಹಂತದಲ್ಲಿದ್ದು, ಇದನ್ನು ನೆಲಸಮ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಶಾಲಾ ಮೈದಾನ ಬಳಕೆಗೆ ಸಹಕಾರಿಯಾಗಲಿದೆ ಎಂದರು.

ಸುಮಾರು 70 ರ ದಶಕದಲ್ಲಿ ಸುಮಾರು 400 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಮಾಹಿತಿ ಇದೆ. ಸರ್ಕಾರ 1 ನೇ ತರಗತಿಯಿಂದಲೂ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಕೆಗೆ ಮುಂದಾಗಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು. ಆಧುನಿಕತೆಗೆ ತಕ್ಕಂತೆ ಆಲೋಚನೆಗಳು ಸಹ ಬದಲಾಗಿದ್ದು, ಅದರಂತೆ ಸರ್ಕಾರಿ ಶಾಲೆಯನ್ನು ಬದಲಿಸಿಕೊಂಡು ಯಾರೂ ಸಹ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಶಾಲೆಯನ್ನು ಮುಚ್ಚದೆ, ಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರಯತ್ನಿಸಿದೆ ಎಂದು ಶಾಸಕರು ನುಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ನನ್ನ ತಂದೆಯವರು ಸಹ ಇದೇ ಶಾಲೆಯಲ್ಲಿ ಓದಿದ್ದರು. ಆ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ ಎಂದರು.

ಶಾಲೆಯ ಶಿಕ್ಷಕಿ ಕೋಮಲ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಕೋವಿಡ್ ನಂತರ ಸಂತ್ರಸ್ತ ಕುಟುಂಬದ ಮಕ್ಕಳು ಹಾಗೂ ಸುತ್ತಮುತ್ತಲಿನ ಕುಟುಂಬಗಳ ಮಕ್ಕಳು ಅಧ್ಯಯನಕ್ಕೆ ಶಾಲೆಯನ್ನು ಪುನರ್ ಆರಂಭಿಸಲಾಗಿದೆ. ಕಳೆದ ವರ್ಷ 12 ಮಕ್ಕಳಿದ್ದರು. ಈ ಬಾರಿ 6 ಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದು, ಶಾಲೆಗೆ ಸುತ್ತುಗೋಡೆ ಆಗುವಂತಾಗಬೇಕು ಎಂದು ಕೋರಿದರು.

ಶಿಕ್ಷಕರಾದ ಬಾಲಕೃಷ್ಣ ಅವರು ಮಾತನಾಡಿ ಇಲ್ಲಿನ ವಿದ್ಯಾರ್ಥಿಗಳು ಭಾಗಮಂಡಲ ಮೊರಾರ್ಜಿ ವಸತಿ ಶಾಲೆ ಹಾಗೂ ಹತ್ತಿರದ ಶಾಲೆಗೆ ವಿದ್ಯಾರ್ಜನೆಗೆ ಹೋಗುತ್ತಿದ್ದಾರೆ. ಹಾಗಾಗಿ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದಾರೆ ಎಂದರು.

ಬಳಿಕ ಮದೆನಾಡಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ, ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತನ ಹಂತಕ್ಕೆ ತಲುಪಿದ ರಾಜ್ಯ ಸರ್ಕಾರ: ಯತ್ನಾಳ್‌
ನೊಂದವರ ಸೇವೆ ಮಾಡಲು ಯುವಜನರು ಮುಂದೆ ಬರಲಿ