ಮಕ್ಕಳ ರಕ್ಷಣಾ ನೀತಿ ಅನುಷ್ಠಾನಕ್ಕೆ ಶ್ರಮಿಸಿ

KannadaprabhaNewsNetwork |  
Published : Feb 14, 2026, 03:00 AM IST
ಯಲಬುರ್ಗಾ ತಾಪಂ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಸರ್ಕಾರಕ್ಕೆ ಬಾಲ್ಯವಿವಾಹ, ಬಾಲಗರ್ಭಿಣಿ ಸಮಸ್ಯೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಎಲ್ಲ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು

ಯಲಬುರ್ಗಾ: ಮಕ್ಕಳ ಹಕ್ಕುಗಳ ಜಾಗೃತಿ ಜತೆಗೆ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮಕ್ಕಳ ಹಕ್ಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಕ್ಕೆ ಬಾಲ್ಯವಿವಾಹ, ಬಾಲಗರ್ಭಿಣಿ ಸಮಸ್ಯೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಎಲ್ಲ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿ ಕುರಿತು ಜಾಗೃತಿ ಮೂಡಿಸಿ, ಪ್ರತಿ ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿ ಮತ್ತು ಶಿಕ್ಷಣ ಪಡೆ ಸಮಿತಿ ರಚಿಸಬೇಕು. ಮುಖ್ಯವಾಗಿ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಕರೆ ತರುವ ಪ್ರಯತ್ನವಾಗಬೇಕು. ಬಾಲ್ಯ ವಿವಾಹ ನಿರ್ಮೂಲನೆಗೆ ಕೈಜೋಡಿಸಬೇಕು. ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರು, ಕಾಂಪೌಂಡ್, ಮೈದಾನ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.

ವಸತಿ ನಿಲಯಗಳಲ್ಲಿ ಹೆರಿಗೆ ಪ್ರಕರಣಗಳು ನಡೆದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಪ್ರಕರಣ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು. ಹೈಸ್ಕೂಲ್ ಮಕ್ಕಳ ಆರೋಗ್ಯ ತಪಾಸಣೆ ವೇಳೆ ಆರೋಗ್ಯ ಇಲಾಖೆ ವೈದ್ಯರು ಆರೋಗ್ಯದ ಬಗ್ಗೆ ಸ್ಪಷ್ಟ ವರದಿ ನೀಡಬೇಕು ಎಂದರು.

ಬಿಇಒ ಅಶೋಕ ಗೌಡರ ಮಾತನಾಡಿ, 2016ರ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಮಾಡುವಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಿದೆ. ಶಾಲೆಗಳಲ್ಲಿ ಮಕ್ಕಳ ಪಾಲಕರ ಸಭೆ ನಡೆಸಿ ಜಾಗೃತಿ ಮೂಡಿಸಿದ್ದೇವೆ. ತಾಲೂಕಿನಲ್ಲಿ 313 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ ಎಂದರು.

ತಹಸೀಲ್ದಾರ್‌ ಪ್ರಕಾಶ ನಾಶಿ, ಶಿರಸ್ತೇದಾರ್‌ ಮುರಳೀಧರ ಕುಲಕರ್ಣಿ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಟಿ.ಜೆ. ದಾನಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಸಿಬ್ಬಂದಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತನ ಹಂತಕ್ಕೆ ತಲುಪಿದ ರಾಜ್ಯ ಸರ್ಕಾರ: ಯತ್ನಾಳ್‌
ನೊಂದವರ ಸೇವೆ ಮಾಡಲು ಯುವಜನರು ಮುಂದೆ ಬರಲಿ