ಸಮೃದ್ಧ ಮಳೆಗಾಗಿ ಹಿಮಾಲಯದ ತಪ್ಪಲಿನಲ್ಲಿ ಮಠಾಧೀಶರ ಪ್ರಾರ್ಥನೆ

KannadaprabhaNewsNetwork |  
Published : May 15, 2024, 01:34 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಹಿಮಾಲಯದ ತಪ್ಪಲಿನ ಬೆಟ್ಟಗಳ ಶ್ರೇಣಿಯಲ್ಲಿ ಮಂಗಳವಾರ ಹಿಂದುಳಿದ,ದಲಿತ ಮಠಾಧೀಶರ ಒಕ್ಕೂಟದ ಪದಾಧಿಕಾರಿಗಳು ಭಗೀರಥ ಜಯಂತಿ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕದಲ್ಲಿ ಸಮೃದ್ಧ ಮಳೆಯಾಗಿ ರೈತಾಪಿ ಸಮುದಾಯದ ಮೊಗದಲ್ಲಿ ಹರ್ಷದ ಹೊನಲು ಚಿಮ್ಮಲಿ, ಅನ್ನದ ತಟ್ಟೆಯಲ್ಲಿ ಬರದ ತುತ್ತುಗಳು ಮಾಯವಾಗಲಿ, ಜಾನುವಾರುಗಳಿಗೆ ಮೇವು ನೀರು ಸಿಗಲಿ, ಎಲ್ಲೆಡೆ ಹಸಿರು ಸಿರಿ ಮೆರೆಯಲಿ.

ಇಂತಹದ್ದೊಂದು ಹಸಿರು ಕನಸು ಸಾಕಾಗರಗೊಳ್ಳಲಿ ಎಂಬ ನಿಜದನಿಯ ಆಶಯ ಹಿಂದಳಿದ, ದಲಿತ ಮಠಾಧೀಶರ ಒಕ್ಕೂಟದ ಆಂತರ್ಯದಿಂದ ಹೊರ ಹೊಮ್ಮಿದೆ. ಇದಕ್ಕಾಗಿ ಸಾವಿರಾರು ಕಿಮೀ ದೂರದ ಹಿಮಾಲಯದ ತಪ್ಪಲಿನಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆಗಳು ನಡೆದಿವೆ. ರಾಜಋಷಿ ಭಗೀರಥ ಮಹರ್ಷಿಗಳ ಜಯಂತಿ ಆಚರಣೆಯೊಟ್ಟಿಗೆ ಬಯಲು ಸೀಮೆಗೆ ಮಳೆ ಸುರಿಯಲ್ಲಿ ಎಂಬ ಮನದಾಳದ ದನಿಗಳು ಮಾರ್ದನಿಸಿವೆ.

ಚಿತ್ರದುರ್ಗ ನೆಲವ ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಪದಾಧಿಕಾರಿಗಳು ಜಮ್ಮು ಕಾಶ್ಮೀರ, ಮನಾಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟ ಮಠಾಧೀಶರುಗಳು ಮಂಗಳವಾರ ಮುಂಜಾನೆ ವೇಳೆಗೆ ಜಮ್ಮತಲುಪಿ ನಂತರ ಹಿಮಾಲಯದ ತಪ್ಪಲಿನಲ್ಲಿ ಸುತ್ತಾಟ ಆರಂಭಿಸಿದ್ದಾರೆ.

ಭಗೀರಥ ಜಯಂತಿ ನೆನಪು ಮಾಡಿಕೊಂಡು ಮಠಾಧೀಶರು ಹಿಮಾಲಯದ ತಪ್ಪಲಿನಲ್ಲಿಯೋ ಫೋಟೋ ಇಟ್ಟು ಜಯಂತಿ ಆಚರಿಸಿದ್ದಾರೆ. ಭಗೀರಥನ ಬದ್ದತೆ, ಹಠ, ಕಾರ್ಯಸೂಚಿ, ಸಾಧನೆಗಳ ವಿಸ್ತೃತಗಳ ಹರವಿ ಚರ್ಚಿಸಿದ್ದಾರೆ. ಕಠಿಣ ತಪಸ್ಸಿನ ಮೂಲಕ ದೇವಗಂಗೆ, ಬ್ರಹ್ಮದೇವ, ಪರಮೇಶ್ವರರನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗಿಳಿಸಿದ್ದನ್ನು ಸ್ಮರಿಸಿದ್ದಾರೆ.

ಭಗೀರಥರು ಸಕಲ ಜೀವಕೋಟಿ ಹಾಗೂ ಮನುಕುಲದ ಉದ್ಧಾರ ಮಾಡಿದ ಮಹರ್ಷಿಗಳು. ಅವರ ಅನುಗ್ರಹ ಆಶೀರ್ವಾದ ಸಕಲ ಭಕ್ತರಿಗೂ ಸಿಗಬೇಕು. ಕರ್ನಾಟಕದಲ್ಲಿ ಭೀಕರ ಬರಗಾಲ ಇರುವುದರಿಂದ ಮಳೆ ಬೆಳೆ ಸಮೃದ್ಧಿ ದೊರೆಯಲೆಂದು ಎಲ್ಲಾ ಮಠಾಧೀಶರು ಹಿಮಾಲಯದ ಶ್ರೇಣಿಯ ಪುಣ್ಯಕ್ಷೇತ್ರದಲ್ಲಿ ಪ್ರಾರ್ಥಿಸಿ, ಕರುನಾಡಿನ ಜತೆಗೆ ಒಳಿತಾಗಲೆಂದು ಆಶಿಸಿದರು.

ಭಗಿರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು,ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮೀಜಿಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ,ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು,ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು,ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮಿಗಳು,ನಾರಾಯಣ ಗುರುಪೀಠದ ರೇಣುಕಾನಂದ ಮಹಾಸ್ವಾಮಿಗಳು,ಕುಂಬಾರ ಗುರು ಪೀಠದ ಕುಂಬಾರಗುಂಡಯ್ಯ ಮಹಾಸ್ವಾಮಿಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಗಳು, ಮೇದಾರ ಗುರು ಪೀಠದ ಶ್ರೀ ಕೇತೇಶ್ವರ ಮಹಾಸ್ವಾಮಿಗಳು.

ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಕೊರಟಗೆರೆಯ ಮಹಾಲಿಂಗ ಸ್ವಾಮಿಗಳು, ಶಿಕಾರಿಪುರದ ಚನ್ನಬಸವ ಮಹಾಸ್ವಾಮಿಗಳು,ಇರುಕಲ್ಲ ಬಸವ ಪ್ರಸಾದ ಮಹಾಸ್ವಾಮಿಗಳು ಈ ವೇಳೆ ಉಪಸ್ಥಿತರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?