ರೈತ ಸಂಪರ್ಕ ಕೇಂದ್ರದ ಕಟ್ಟಡ ಕಳಪೆ: ರೈತರ ಆಕ್ರೋಶ

KannadaprabhaNewsNetwork |  
Published : Sep 26, 2024, 10:08 AM IST
ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಬುಧವಾರ ರೈತ ಸಂಪರ್ಕ ಕೇಂದ್ರ ಕಟ್ಟಡ ವೀಕ್ಷಣೆಗೆ ಬಂದ ಎಂಜನಿಯರ್‌ರೊಬ್ಬರನ್ನು ರೈತರು ತರಾಟೆ ತೆಗೆದುಕೊಂಡರು. | Kannada Prabha

ಸಾರಾಂಶ

ತಾಲೂಕಿನ ಸಿದ್ದಾಪುರ ಗ್ರಾಮದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ವೀಕ್ಷಣ ಮಾಡಲು ಆಗಮಿಸಿದ್ದ ಕೆಆರ್‌ಐಡಿಎಲ್ ಎಂಜಿನಿಯರರನ್ನು ರೈತರು ಬುಧವಾರ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ವೀಕ್ಷಣೆಗೆ ಬಂದಿದ್ದ ಎಂಜಿನಿಯರ್‌ ತರಾಟೆಗೆ ತೆಗೆದುಕೊಂಡ ರೈತರು

ಕನ್ನಡಪ್ರಭ ವಾರ್ತೆ ಕಾರಟಗಿ

ತಾಲೂಕಿನ ಸಿದ್ದಾಪುರ ಗ್ರಾಮದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ವೀಕ್ಷಣ ಮಾಡಲು ಆಗಮಿಸಿದ್ದ ಕೆಆರ್‌ಐಡಿಎಲ್ ಎಂಜಿನಿಯರರನ್ನು ರೈತರು ಬುಧವಾರ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಐದು ವರ್ಷಗಳಿಂದ ಕೆಆರ್‌ಐಡಿಎಲ್‌ನಿಂದ ನಿರ್ಮಾಣಗೊಂಡ ರೈತ ಸಂಪರ್ಕ ಕೇಂದ್ರದ ಕಟ್ಟಡ ವೀಕ್ಷಣೆಗೆ ಎಇಇ ಅನಿಲ್ ಪಾಟೀಲ್ ಆಗಮಿಸಿದ್ದರು. ಈ ಘಟನೆ ಇಲಾಖೆ ಎಂಜಿನಿಯರ್ ಬೇಜವಾಬ್ದಾರಿ ಮತ್ತು ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ರೈತರು ಆರೋಪಿಸಿದರು.

ರೈತ ಸಂಘದ ಸದಸ್ಯರು ಮಾತನಾಡಿ, ಕಟ್ಟಡ ನಿರ್ಮಾಣವಾಗಿ ಸುಮಾರು ಐದಾರು ವರ್ಷಗಳು ಗತಿಸಿವೆ. ಕಟ್ಟಡ ಸಂಪೂರ್ಣ ಕಳಪೆ ಕಾಮಗಾರಿಯಿಂದ ನಡೆದಿದೆ. ಆಗಲೇ ಗೋಡೆಗಳು ಬಿರುಕು ಕಾಣಿಸುತ್ತಿದ್ದು, ಇಡೀ ಕಟ್ಟಡ ಬುನಾದಿ ಇಲ್ಲದೇ ನಿರ್ಮಾಣವಾಗಿದೆ ಎಂದು ಕಟ್ಟಡದ ಸ್ಥಿತಿಯನ್ನು ಎಂಜಿನಿಯರ್ ಮುಂದೆ ತಿಳಿಸಿದರು. ಮುಖ್ಯವಾಗಿ ಗುಣಮಟ್ಟದ ಸಿಮೆಂಟ್ ಬಳಸಿಲ್ಲ, ತೀರಾ ಅವಸರದಲ್ಲಿಯೇ ಇಡೀ ಕಟ್ಟಡವನ್ನು ನಿರ್ಮಿಸಿ ಬಿಲ್ ಎತ್ತಲಾಗಿದೆ, ಇದರಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದ್ದು, ಕೂಡಲೇ ಹಣವನ್ನು ಸರ್ಕಾರಕ್ಕೆ ಒಪ್ಪಿಸಬೇಕು ತಪ್ಪತಸ್ಥರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬೇಕೆಂದು ಪಟ್ಟು ಹಿಡಿದರು.

ಈ ನಡುವೆ ಪ್ರಾರಂಭದಲ್ಲಿ ಎಂಜಿನಿಯರ್ ಅನಿಲ್ ಪಾಟೀಲ್ ಇಲಾಖೆ ಇಇಗೆ ದೂರವಾಣಿ ಕರೆ ಮಾಡಿ ಅಲ್ಲಿನ ಪರಿಸ್ಥಿತಿ ವಿವರಿಸಲು ಮುಂದಾದರು. ಆಗ ಅತ್ತ ಕಡೆಯಿಂದ ಇಇ ರೈತರ ಬೇಡಿಕೆ ಕೇಳಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ ವರದಿಯನ್ನು ಮಾತ್ರ ಪರಿಗಣಿಸಲಾಗುವುದು ಎಂದರು.

ಸಮಜಾಯಿಸಲು ಹೋದ ಎಂಜಿನಿಯರ್ ಅನಿಲ್ ಪಾಟೀಲರ ಮಾತಿಗೆ ಮನ್ನಣೆ ನಡೆದ ರೈತರು, ಅನೇಕ ಅಧಿಕಾರಿಗಳು ಈ ಕಟ್ಟಡದ ಕುರಿತು ಕೇವಲ ಸುಳ್ಳು ಹೇಳಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಮೊದಲು ಲಿಖಿತವಾಗಿ ನಮಗೆ ಭರವಸೆ ನೀಡಿ, ಅಲ್ಲಿಯವರೆಗೆ ನಿಮ್ಮನ್ನು ಸ್ಥಳದಿಂದ ಹೋಗಲು ಬಿಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕೊನೆಗೆ ಎಂಜಿನಿಯರ್ ಬೇರೆ ದಾರಿಯಿಲ್ಲದೆ, ಲಿಖಿತವಾಗಿ ಪತ್ರದಲ್ಲಿ ಬರೆದು ಕೊಟ್ಟು ಅ.೧. ೨೦೨೪ರಂದು ಸ್ಥಳಕ್ಕೆ ಇಇ ಹಾಗೂ ಜೆಇ ಬರುವುದಾಗಿ ಭರವಸೆ ನೀಡಿದ ಬಳಿಕ ರೈತರು ತಣ್ಣಗಾದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಾರುತಿ, ರೈತ ಸಂಘದ ಶರಣಪ್ಪ ಗದ್ದಿ, ಗ್ರಾಮಸ್ಥರಾದ ಚನ್ನಬಸಪ್ಪ ಹೊಸಮನಿ, ನಾಗೇಶಪ್ಪ, ಶೇಖರಪ್ಪ, ದಾದಾಪೀರ್, ವಕೀಲ ಪ್ರವೀಣ್‌ಕುಮಾರ್ ಹೊಸಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ