ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗ್ರಾಮೀಣ ಪ್ರದೇಶದ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿರುವುದರಿಂದ ಇಲ್ಲಿನ ಕೃಷಿಕರು ತಮ್ಮ ಕೃಷಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಿರ್ವಹಿಸಲು ಸಾಕಷ್ಟು ದುಬಾರಿ ವೆಚ್ಚಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಾಕೂರು ಶಿರಂಗಾಲ ಗ್ರಾಪಂ ಕಡೆಯಿಂದ ಗುಂಡುಗುಟ್ಟಿ ಮಾದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದೊಡ್ಡ ಗುಂಡಿಗಳಿಂದ ವಾಹನಗಳು ಈ ಭಾಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಈ ಭಾಗದಲ್ಲಿ ನೂತನವಾದ ಜೈನ ಮಂದಿರ ನಿರ್ಮಾಣಗೊಳ್ಳುತ್ತಿದ್ದು ನಿತ್ಯ ನೂರಾರು ಪ್ರವಾಸಿಗಾರು ದೇವಾಲಯದ ವೀಕ್ಷಣೆಗೆ ತೆರಳುತ್ತಾರೆ. ಆದರೆ ರಸ್ತೆಯಲ್ಲಿ ವಾಹನದ ದಟ್ಟಣೆ ಹೆಚ್ಚಾಗಿದೆ ವಾಹನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸಿದರೆ ನೇರವಾಗಿ ವರ್ಕ್ ಶಾಪ್‌ಗೆ ತೆರಳುವ ಪರಿಸ್ಥಿತಿ ಇದೆ ಎಂದು ಈ ಭಾಗದ ನಿವಾಸಿಗಳು ಅಳಲು ತೊಡಿಕೊಂಡಿದ್ದಾರೆ.
ಈ ವ್ಯಾಪ್ತಿಯು ೨ ಗ್ರಾಪಂಗಳನ್ನೊಳಗೊಂಡಿದೆ. ನಾಕೂರು ಶಿರಂಗಾಲ ಹಾಗೂ ಹರದೂರು ಗ್ರಾಪಂ ಈ ರಸ್ತೆಗೆ ಕಾಯಕಲ್ಪ ಯಾವಾಗ ದೊರಕುತ್ತದೆ ಎಂದು ಇಲ್ಲಿನ ನಿವಾಸಿಗಳು ಕಾಯುತ್ತಿದ್ದಾರೆ. ಈ ಭಾಗದಿಂದ ನಿತ್ಯ ನೂರಾರೂ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ನಡೆದುಕೊಂಡೇ ತೆರಳಬೇಕಾಗಿದೆ. ಸುತ್ತ ಮುತ್ತಲ್ಲೂ ಕೃಷಿ ಅವಲಂಭಿತ ಪ್ರದೇಶವಾಗಿದೆ. ಸುಂಟಿಕೊಪ್ಪ ಮಾದಾಪುರ ಸೋಮವಾರಪೇಟೆ ರಾಜ್ಯ ಹೆದ್ದಾರಿಯು ಸಂಚಾರಕ್ಕೆ ಆಡಚಣೆ ಉಂಟಾದರೆ ಬದಲಿ ಸಂಪರ್ಕ ರಸ್ತೆಯನ್ನಾಗಿ ಉಪಯೋಗಿಸುವ ದಿಸೆಯಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ರಸ್ತೆ ಡಾಂಬರ್ ಸಂಪೂರ್ಣ ಕಿತ್ತು ಹಳ್ಳದಂತಾಗಿದೆ. ಈ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಚಾಲಕರ ಗೋಳು ಹೇಳ ತೀರದಾಗಿದೆ. ಸಣ್ಣ ಗುಂಡಿಯನ್ನು ತಪ್ಪಿಸಲು ಹೋಗಿ ದೊಡ್ಡ ಗುಂಡಿ ಬೀಳುವಂತಾಗಿದೆ. ರಸ್ತೆ ಕಿರಿದಾಗಿರುವುದರಿಂದ ಎರಡು ವಾಹನಗಳು ಎದುರುಬದುರಾದರೆ ಮತ್ತಷ್ಟು ಸಮಸ್ಯೆ ಎದುರಿಬೇಕಾಗುತ್ತದೆ ಎಂದು ಈ ಭಾಗದ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.ಈ ಭಾಗದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಯಾದರೆ ಭಾರಿ ಸಮಸ್ಯೆ ಎದುರಿಸಬೇಕಾಗಿದೆ. ದುಪ್ಪಟ್ಟು ಹಣ ನೀಡುತ್ತೇವೆ ಎಂದರೂ ಈ ರಸ್ತೆಯಲ್ಲಿ ಸಂಚರಿಸಲು ಬಾಡಿಗೆ ವಾಹನದಾರರು ಬರಲು ಹಿಂಜರಿಯುತ್ತಾರೆ. ಕಳೆದ ೬ ವರ್ಷಗಳಿಂದ ಬೃಹತ್ ಜೈನ ಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈ ಮಂದಿರಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ದೇವಾಲಯ ವೀಕ್ಷಣೆಗೆ ಬರುತ್ತಾರೆ. ಅದೆಷ್ಟೋ ವಾಹನಗಳು ಕೆಟ್ಟು ನಿಂತ ಪ್ರಸಂಗಗಳನ್ನು ಈ ಭಾಗದ ನಿವಾಸಿಗಳು ಮೆಲಕು ಹಾಕಿಕೊಳ್ಳುತ್ತಾರೆ.
ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಜನತೆ ಈ ರಸ್ತೆ ಮೂಲಕವೇ ಮಾದಾಪುರ ಸೇರಿದಂತೆ ಸುತ್ತ ಮುತ್ತಲ್ಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಮಕ್ಕಳು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಡಾಂಬರು ಕಿತ್ತು ಹೋಗಿ ಹೊಂಡ ಗುಂಡಿಗಳಿಂದ ಕೂಡಿದ್ದು ಇದಕ್ಕೆ ಕಾಯಕಲ್ಪ ಒದಗಿಸುವ ಕಾರ್ಯವಾಗಬೇಕು.
-ಕುಮಾರ, ವಾಹನ ಚಾಲಕ
-ಪಿ.ಎಫ್.ಸಬಾಸ್ಟೀನ್, ಸುಂಟಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ
-ಆಸ್ಮ, ನಾಕೂರು ಶಿರಂಗಾಲ ಗ್ರಾಪಂ ಅಭಿವೃದ್ಧಿ ಅಧಿಕಾರಿ