ರಾಣಿಬೆನ್ನೂರಿನ ಪೊಲೀಸ್ ವಸತಿಗೃಹಗಳ ಕಾಮಗಾರಿ ಕಳಪೆ: ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jun 21, 2025, 12:49 AM IST
ರಾಣಿಬೆನ್ನೂರಿನ ರೈಲ್ವೆ ಸ್ಟೇಷನ್ ರಸ್ತೆಯ ಪಕ್ಕದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ವಸತಿಗೃಹಗಳ ಕಾಮಗಾರಿ ಕಳಪೆಯಾಗಿರುವುದನ್ನು ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ ತೋರಿಸಿದರು. | Kannada Prabha

ಸಾರಾಂಶ

ಕಟ್ಟಡದ ಕೆಲಭಾಗಗಳಲ್ಲಿ ಪ್ಲಾಸ್ಟರ್ ಮಾಡಲಾಗಿದ್ದು, ಕೆಲವು ಕಡೆ ಬಿರುಕು ಕಂಡುಬಂದಿದೆ. ಇದಲ್ಲದೆ ಈಗಾಗಲೇ ನಿರ್ಮಾಣಗೊಂಡು ಕಳೆದ ವರ್ಷ ಉದ್ಘಾಟನೆಯಾಗಿರುವ ಎರಡು ಹಂತದ ಬೃಹತ್ ಕಟ್ಟಡಗಳಲ್ಲಿ ಅಲ್ಲಲ್ಲಿ ಬಿರುಕು ಉಂಟಾಗಿದ್ದು, ನೀರು ಬಸಿಯುತ್ತಿದೆ ಎಂದು ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ ಆರೋಪಿಸಿದರು.

ರಾಣಿಬೆನ್ನೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯ ಪಕ್ಕದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ವಸತಿಗೃಹಗಳ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ವಾರ್ಡಿನ ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ ಆಗ್ರಹಿಸಿದ್ದಾರೆ.ನೂತನ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಕನ್ನಡಪ್ರಭ ಜತೆ ಮಾತನಾಡಿದ ಅವರು, ಬೆಂಗಳೂರಿನ ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ಇವರಿಂದ ನಿರ್ಮಾಣವಾಗುತ್ತಿರುವ ಸುಮಾರು 20ಕ್ಕೂ ಅಧಿಕ ಮನೆಗಳ ಬೃಹತ್ ಬಳಸಲಾಗಿರುವ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿವೆ. ಬೃಹತ್ ಕಟ್ಟಡಕ್ಕೆ ಅಡ್ಡಲಾಗಿ ಬುನಾದಿಯಿಂದ ಹಾಕಲಾದ ತಳಮಟ್ಟದ ಭೀಮ್‌ಗಳಿಗೆ 6 ಎಂಎಂ ಕಬ್ಬಿಣದ ರಾಡುಗಳನ್ನು ಎತ್ತರಕ್ಕೆ ಹಾಕಿದ್ದು, ಅಡ್ಡಲಾಗಿ ಹಾಕದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಜತೆಗೆ ಭೀಮ್‌ನಲ್ಲಿಯೇ ಸ್ನಾನಗೃಹದ ಹಾಗೂ ಯುಜಿಡಿಯ ಪೈಪ್‌ಗಳನ್ನು ಹೊರತರಲು ದೊಡ್ಡದಾದ ಹೋಲುಗಳನ್ನು ಮೂರು ಅಂತಸ್ತಿನ ಎಲ್ಲ ಕಟ್ಟಡಗಳ ಭೀಮ್‌ನಲ್ಲಿಯೇ ಕೊರೆದಿದ್ದಾರೆ.

ಮೂರಂತಸ್ತಿನ ಕಟ್ಟಡ ಹಾಗೂ ಇಪ್ಪತ್ತಕ್ಕೂ ಅಧಿಕ ಮನೆಗಳನ್ನು 6 ಎಂಎಂ ಕಬ್ಬಿಣದ ರಾಡುಗಳನ್ನು ಬಳಸಿ ನಿರ್ಮಿಸಲಾಗಿದೆ. ಅಷ್ಟೊಂದು ಭಾರವನ್ನು ಈ ಸಣ್ಣ ರಾಡುಗಳು ಹೋರುವವೇ? ನಿರ್ಮಾಣದ ಕಟ್ಟಡದಲ್ಲಿ ವಾಸ ಮಾಡಲು ಯೋಗ್ಯವೇ ಎಂದವರು ಪ್ರಶ್ನಿಸಿದರು.

ಕಟ್ಟಡದ ಕೆಲಭಾಗಗಳಲ್ಲಿ ಪ್ಲಾಸ್ಟರ್ ಮಾಡಲಾಗಿದ್ದು, ಕೆಲವು ಕಡೆ ಬಿರುಕು ಕಂಡುಬಂದಿದೆ. ಇದಲ್ಲದೆ ಈಗಾಗಲೇ ನಿರ್ಮಾಣಗೊಂಡು ಕಳೆದ ವರ್ಷ ಉದ್ಘಾಟನೆಯಾಗಿರುವ ಎರಡು ಹಂತದ ಬೃಹತ್ ಕಟ್ಟಡಗಳಲ್ಲಿ ಅಲ್ಲಲ್ಲಿ ಬಿರುಕು ಉಂಟಾಗಿದ್ದು, ನೀರು ಬಸಿಯುತ್ತಿದೆ. ಇನ್ನೂ ನಿರ್ಮಾಣ ಹಂತದ ಇನ್ನೊಂದು ಬೃಹತ್ ಕಟ್ಟಡಕ್ಕೆ ತುಕ್ಕು ಹಿಡಿದ ಕಬ್ಬಿಣಗಳನ್ನು ಹಾಗೂ ಆರು ಮತ್ತು ಎಂಟು ಎಂಎಂನ ಕಬ್ಬಿಣಗಳನ್ನು ಜೋಡಿಸಿ ಕಾಂಕ್ರೀಟ್ ಹಾಕಲು ತಯಾರಿ ನಡೆಸಿದ್ದಾರೆ.

ಒಟ್ಟಾರೆ ನಾಲ್ಕು ಬೃಹತ್ ಕಟ್ಟಡಗಳ ನಿರ್ಮಾಣಗೊಂಡಿರುವ, ನಿರ್ಮಾಣವಾಗಿರುವ, ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು, ಲೋಕಾಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಂಬಂಧಿಸಿದ ಸರ್ಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ