ತೀರ್ಥಹಳ್ಳಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಪೋಲಿಸ್ ಠಾಣೆ ಕಾಮಗಾರಿ ಕಳಪೆ: ಆರ್‌ಎಂಎಂ ಆರೋಪ

KannadaprabhaNewsNetwork |  
Published : Jul 18, 2024, 01:44 AM ISTUpdated : Jul 18, 2024, 11:31 AM IST
ಫೋಟೋ 17 ಟಿಟಿಎಚ್ 01: ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸುದ್ದಿಗೋಷ್ಠಿಯಲ್ಲಿ ಕಳಪೆ ಕಾಮಗಾರಿಗಳ ಫೋಟೋ ಪ್ರದರ್ಶಿಸಿದರು. | Kannada Prabha

ಸಾರಾಂಶ

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸುದ್ದಿಗೋಷ್ಠಿಯಲ್ಲಿ ಕಳಪೆ ಕಾಮಗಾರಿಗಳ ಫೋಟೋ ಪ್ರದರ್ಶಿಸಿದರು.

 ತೀರ್ಥಹಳ್ಳಿ :  ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಗ್ರಾಮೀಣಾಭಿವೃದ್ಧಿ ಭವನ, ಪೋಲಿಸ್ ಠಾಣೆ, ಅಗ್ನಿಶಾಮಕದಳ ಕಟ್ಟಡಗಳ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಒತ್ತಾಯಿಸಿದರು.

ಬುಧವಾರ ಪಟ್ಟಣದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರುತ್ತಿದ್ದಾರೆಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಈ ಎಲ್ಲಾ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದರೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಜನ್ಯದ ದೃಷ್ಟಿಯಿಂದ ಸಮಯೋಚಿತವಾಗಿ ಕಾಮಗಾರಿಗಳ ಕುರಿತಂತೆ ಒಂದಿಷ್ಟು ಮೆಚ್ಚುಗೆಯ ಮಾತನಾಡಿದ್ದು ಪಕ್ಷದ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದ್ದು, ಈ ಬಗ್ಗೆ ಪ್ರಶ್ಚಾತಾಪವಾಗಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಟ್ಯಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಗಳು ಸಂಭಂಧಿಸಿದ ಇಲಾಖೆಗೆ ಹಸ್ತಾಂತರವಾಗುವ ಮುನ್ನವೇ ಸೋರುತ್ತಿವೆ. ಛಾವಣಿಗೆ ತ್ಯಾಪೇ ಹಾಕುವ ಕೆಲಸ ಕೂಡಾ ನಡೆದಿದೆ. ಈ ಕಟ್ಟಡಗಳಲ್ಲಿ ಯವುದೇ ರೀತಿಯ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದೂ ಪ್ರಶ್ನಿಸಿದರು.

ಕಳಪೆಯಾಗಿದ್ದರೂ ಎಲ್ಲಾ ಕಾಮಗಾರಿಗಳನ್ನು ತಾನೇ ಮಾಡಿಸಿದ್ದು ಎಂದು ಹೇಳುವ ಶಾಸಕ ಆರಗ ಜ್ಞಾನೇಂದ್ರರೇ ಇದಕ್ಕೆ ಹೊಣೆಗಾರರಾಗಿದ್ದಾರೆ. ಮಾತೆತ್ತಿದರೆ ಸಿಬಿಐ ತನಿಖೆಗೆ ಆಗ್ರಹಿಸುವ ಆರಗ ಜ್ಞಾನೇಂದ್ರ ಈ ಎಲ್ಲಾ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿಯ ಭಾರತೀಪುರ ತಿರುವಿನಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ನಡೆಸಲಾಗುತ್ತಿದೆ. ಗುಡ್ಡವನ್ನು ಕಡಿದು ಭಾರಿ ಪ್ರಮಾಣದಲ್ಲಿ ಮಣ್ಣು ಸಾಗಿಸುತ್ತಿರುವುದಲ್ಲದೇ ಎಗ್ಗಿಲ್ಲದೇ ಮರಗಳನ್ನು ಕಡಿಯಲಾಗಿದೆ. ಈ ಭಾಗದಲ್ಲಿ ಭೂ ಕುಸಿತವಾಗುವ ಆತಂಕವಿದ್ದು ಈ ಬಗ್ಗೆ ಮೌನ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ. ಇದರಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆಯಾಗಬೇಕು ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ಹಣದಿಂದ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದನ್ನು ನೂರಾರು ಕೋಟಿ ಕೇಂದ್ರದ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ಸ್ವಂತಕ್ಕಾಗಿ 300 ಎಕರೆ ಭೂಮಿಯನ್ನು ಡಿ ನೋಟಿಫೈ ಮಾಡಿಸಿಕೊಂಡರುವ ಸಂಸದ ಬಿ.ವೈ.ರಾಘವೇಂದ್ರ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಗೂ ಅಸಡ್ಡೆ ತೋರಿಸುತ್ತಲೇ ಬಂದಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿದೆ. ಇದು ದೇಶದಲ್ಲಿ ಪ್ರಥಮವಾಗಿದೆ. ಬಿ.ವೈ.ರಾಘವೇಂದ್ರರ ಸಾಧನೆ ಏನು ಎಂದೂ ಪ್ರಶ್ನಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ