ಪರಿಶಿಷ್ಟರಿಗೆ ಕಳಪೆ ಪಂಪ್‌ಸೆಟ್‌ ವಿತರಣೆ; ಶಾಸಕ ಬಸವಂತಪ್ಪ ಕಿಡಿ

KannadaprabhaNewsNetwork | Published : Mar 9, 2024 1:32 AM

ಸಾರಾಂಶ

ದಾವಣಗೆರೆ ತಾಲೂಕು ಆನಗೋಡು ಗ್ರಾಮದಲ್ಲಿ ಗುಣಮಟ್ಟದ, ಐಎಸ್ಐ ಮಾರ್ಕ್‌ನ ಪಂಪ್‌ ಸೆಟ್ ಹಾಗೂ ಉಪಕರಣ ವಿತರಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳಪೆ ಗುಣಮಟ್ಟದ ಮೋಟಾರು ಪಂಪ್‌ ಸೆಟ್ ಹಾಗೂ ಉಪಕರಣಗಳನ್ನು 32 ರೈತರಿಗೆ ವಿತರಿಸಲು ತಂದಿದ್ದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಳಪೆ ಗುಣಮಟ್ಟದ ವಸ್ತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ವಾಪಾಸ್ಸು ಕಳಿಸಿದ ಘಟನೆ ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಆನಗೋಡು ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದಡಿ 2020-22ನೇ ಸಾಲಿನಲ್ಲಿ 32 ಫಲಾನುಭವಿ ರೈತರ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಮೋಟಾರು ಪಂಪ್‌ ಸೆಟ್‌ ಹಾಗೂ ಉಪಕರಣ ವಿತರಿಸುವ ವೇಳೆ ಅವುಗಳ ಗುಣಮಟ್ಟದ ಬಗ್ಗೆ ರೈತರು ಶಾಸಕ ಕೆ.ಎಸ್‌.ಬಸವಂತಪ್ಪ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಶಾಸಕ ಬಸವಂತಪ್ಪ, ಕಳಪೆ ಮೋಟಾರು, ಪಂಪ್ ಸೆಟ್ ಬಗ್ಗೆ ಅಧಿಕಾರಿಗಳನ್ನು ರೈತರ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಮಾತನಾಡಿದ ಕೆ.ಎಸ್.ಬಸವಂತಪ್ಪ, ಬಡ ಪರಿಶಿಷ್ಟ ರೈತರಿಗೆ ಇಂತಹ ಕಳಪೆ ಗುಣಮಟ್ಟದ ಮೋಟಾರು, ಉಪಕರಣ ಕೊಡುವ ಅವಶ್ಯಕತೆ ಇಲ್ಲ. ತಕ್ಷಣ‍ ಅವುಗಳನ್ನು ವಾಪಾಸ್ಸು ಪಡೆಯಿರಿ. 32 ರೈತರಿಗೂ ಗುಣಮಟ್ಟದ, ಪ್ರಸಿದ್ಧ ಕಂಪನಿಗಳಿಗೆ ಸೇರಿದ ಮೋಟಾರು, ಪಂಪ್ ಸೆಟ್‌ಗಳನ್ನೇ ವಿತರಿಸಬೇಕು. ಬೆಂಗಳೂರಿನ ಯುನೈಟೆಟ್ ಏಜೆನ್ಸಿಯಿಂದ ವಿತರಿಸಲು ತಂದಿದ್ದ ಐಎಸ್ಐ ಮಾರ್ಕ್ ಇಲ್ಲದ ಮೋಟಾರು ಪಂಪ್ ಸೆಟ್, ಉಪಕರಣಗಳನ್ನು ಯಾವುದೇ ಕಾರಣಕ್ಕೂ ರೈತರಿಗೆ ಕೊಡಬೇಕಿಲ್ಲ. ಗುಣಮಟ್ಟದ ಐಎಸ್ಐ ಮಾರ್ಕಿನ ಗ್ಯಾರಂಟಿ ಇರುವಂತಹ ಮೋಟಾರು ಪಂಪ್‌ಸೆಟ್, ಉಪಕರಣಗಳನ್ನಷ್ಟೇ ವಿತರಿಸಬೇಕು ಎಂದು ತಾಕೀತು ಮಾಡಿದರಲ್ಲದೆ, ರೈತರಿಗೆ ಎಷ್ಟೆಷ್ಟು ಪೈಪ್ ಕೊಡಬೇಕೆಂಬ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹರಿಹಾಯ್ದರು.

ರೈತರು ಸಹ ಗುಣಮಟ್ಟದ ಉಪಕರಣ ವಿತರಿಸಿದರೆ ಮಾತ್ರ ಪಡೆಯಬೇಕು. ಇಲ್ಲದಿದ್ದರೆ, ನನ್ನ ಗಮನಕ್ಕೆ ತಂದರೆ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ. ಅಲ್ಲದೇ ಅಂಬೇಡ್ಕರ್, ಆದಿ ಜಾಂಬವ, ವೀರಶೈವ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಹಿಂದೆ ಇಂತಹ ಕಳಪೆ ಗುಣಮಟ್ಟದ ಉಪಕರಣ ವಿತರಿಸಿರುವ ಬಗ್ಗೆ ನನ್ನ ಗಮನಕ್ಕೆ ತಂದರೆ, ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವೆ ಎಂದು ರೈತರಿಗೆ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಭರವಸೆ ನೀಡಿದರು.

ಈ ವೇಳೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಡಿ.ಎಂ.ಬಸವರಾಜಪ್ಪ, ಫೀಲ್ಡ್ ಆಫೀಸರ್ ಮರಿಸ್ವಾಮಿ, ಕರಿಬಸಪ್ಪ, ಬಸವರಾಜ, ನಸ್ರುಲ್ಲಾ, ಗ್ರಾಪಂ ಸದಸ್ಯರಾದ ದೇವಣ್ಣ, ಬಸಣ್ಣ, 32 ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Share this article