ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಕಳಪೆ ಫಲಿತಾಂಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಭ್ರಷ್ಟಾಚಾರ, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ನೇರ ಕಾರಣವಾಗಿದೆ ಎಂದು ರೈತ ಹೋರಾಟಗಾರ ಅಣಗಳ್ಳಿ ಬಸವರಾಜು ಎಚ್ಚರಿಸಿದರು.ಕೊಳ್ಳೇಗಾಲದ ಗುರುಭವನದಲ್ಲಿ ಶಿಕ್ಷಣ ಇಲಾಖಾ ಅಧಿಕಾರಿಗಳ ಜೊತೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮುಂದಿನ ದಿನಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ರೂಪಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಭವಿಷ್ಯ ರೂಪಿಸಲು ಮುಕ್ತ ಚರ್ಚೆಗೆ ಆಗಮಿಸಬೇಕು, ಇಲ್ಲದಿದ್ದಲ್ಲಿ ನಾವು ಭ್ರಷ್ಟಾಚಾರದ ಕುರಿತು ಗಮನ ಸೆಳೆಯುವ ನಿಟ್ಟಿನಲ್ಲಿ ಖುದ್ದು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಕೆಲಸ ಮಾಡಿ ಡಿಡಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹಿಸಬೇಕಾಗುತ್ತದೆ ಎಂದರು.
ಸ್ಥಳಕ್ಕೆ ಡಿಡಿಪಿಐ ಬರಬೇಕು, ನಮ್ಮೆಲ್ಲ ಪ್ರಶ್ನೆಗಳಿಗೂ ಸೂಕ್ತ ಸಮಜಾಯಿಸಿ ನೀಡಬೇಕು, ಈ ವಿಚಾರದಲ್ಲಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆಗಳಲ್ಲಿನ ಉತ್ತಮ ಫಲಿತಾಂಶಕ್ಕೆ ಅಧಿಕಾರಿಗಳು ಸ್ಪಂದಿಸಬೇಕು, ಮೊದಲು ಪ್ರಾಥಮಿಕ ಹಂತದಲ್ಲಿ ಮೌಲ್ಯಯುತ ಕಲಿಕೆಗಾಗಿ ಮೈಗಳ್ಳ ಶಿಕ್ಷಕರಿಗೆ ಪಾಠ ಕಲಿಸಬೇಕು, ಪ್ರಾಥಮಿಕ ಹಂತದಲ್ಲಿ ಇನ್ನು ಕೆಲ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ ಆಗುತ್ತಿಲ್ಲ, ಪ್ರೌಢಶಾಲೆಯಲ್ಲಿ ವಿಷಯವಾರು ಶಿಕ್ಷಕರು ಕೊರತೆ ನಾನಾ ಕಾರಣಗಳಿಗಾಗಿ ಎಸ್ಸೆಸ್ಸೆಲ್ಸಿ ಜಿಲ್ಲೆಯಲ್ಲಿ ಕಳಪೆ ಫಲಿತಾಂಶ ದೊರೆತಿದೆ ಎಂದರು.ಈ ವೇಳೆ ರೈತ ಸಂಘದ ಬಸವರಾಜು, ನರಸಿಂಹನ್, ಚಿನ್ನಸ್ವಾಮಿ, ರಾಮಕೃಷ್ಣ, ಯಳಂದೂರು ನಾಗರಾಜು, ಆನಂದ್ ಸೇರಿದಂತೆ ಹಲವು ಮುಖಂಡರು ಅಸಮಾಧಾನ ಹೊರಹಾಕಿದರು. ನಿಯಮ ಮೀರಿ ನೂರಾರು ಖಾಸಗಿ ಶಾಲೆಗಳಿಗೆ ಮಾನ್ಯತೆ ನವಿಕರಣಗೊಳಿಸಿ ಇಲಾಖಾ ನಿಯಮ ಉಲ್ಲಂಘಿಸಿದ್ದಾರೆ, ಫಲಿತಾಂಶಕ್ಕಾಗಿ ಸರಿಯಾದ ಕ್ರಮ, ಜವಾಬ್ದಾರಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಫಲಿತಾಂಶದಲ್ಲಿ ಕುಸಿತವಾಗಿದೆ. ಅಬ್ದುಲ್ ಕಲಾಂ ಸಂಸ್ಥೆಗೆ ನಿಯಮ ಮೀರಿ ಅನುಮತಿ ನೀಡಿದ ಪರಿಣಾಮ ಕೆಲಸ ಸಿಗುತ್ತೆ ಎಂದು ನಂಬಿದ ಇಬ್ಬರು ಮಹಿಳೆಯರು ತಮ್ಮ ಮಾಂಗಲ್ಯ ಸರ ಅಡವಿಟ್ಟು ಲಕ್ಷಾಂತರ ರು. ಸಂಸ್ಥೆಯವರಿಗೆ ನೀಡಿ ಮೋಸ ಹೋಗಿದ್ದಾರೆ.
ಇದರಿಂದ ಇವರ ಅನುಮತಿಯಿಂದ ಲಕ್ಷಾಂತರ ರು. ಕಳೆದುಕೊಂಡವರಿಗೆ ಡಿಡಿಪಿಐ ಖುದ್ದು ಹಣ ಪಾವತಿಸಬೇಕು, ಇಲ್ಲವೇ ಸಂಬಂಧಿಸಿದ ಕಲಾಂ ಸಂಸ್ಥೆಯವರಿಂದ ಹಣ ಪಾವತಿಸಿ ನ್ಯಾಯ ದೊರಕಿಸಿಕೊಡಬೇಕು, ಈ ನಿಟ್ಟಿನಲ್ಲಿ ಶೀಘ್ರ ಸಮಸ್ಯೆ ಬಗೆಹರಿಸಲು ಡಿಡಿಪಿಐ ವಿಫಲರಾದರೆ ನೇರವಾಗಿ ಸಿಎಂಗೆ ಇವರ ಭ್ರಷ್ಟಾಚಾರ ವಿವರಿಸಬೇಕಾಗುತ್ತದೆ. ನೊಂದವರು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ ಎಂದು ಪ್ರಶ್ನಿಸಿದರು.ಮಂಜುನಾಥ ನಗರ ಸರ್ಕಾರಿ ಶಾಲೆಯ ಆವರಣದಲ್ಲಿ ಹಾವಿನ ಹುತ್ತವಿದ್ದು ಮಕ್ಕಳಿಗೆ ರಕ್ಷಣೆನೀಡುವ ನಿಟ್ಟಿನಲ್ಲಿ ಹುತ್ತ ತೆರವುಗೊಳಿಸಿ, ಉರ್ದು ಸರ್ಕಾರಿ ಶಾಲೆಯಲ್ಲಿನ ಜಾಗ ಹಾಗೂ ಇನ್ನಿತರೆ ಸಮಸ್ಯೆ ಬಗೆಹರಿಸಿ, ಮಂಜುನಾಥ ನಗರ ಶಾಲೆಯಲ್ಲಿ ಬೆರಳೆಣಿಕೆಯ ಮಕ್ಕಳಿದ್ದಾರೆ, ಕಲಿಕಾ ಪ್ರಗತಿ ಕುಂಠಿತವಾದರೆ ಮಕ್ಕಳ ದಾಖಲಾತಿ ಪ್ರಮಾಣ ಕುಂಠಿತಗೊಳ್ಳಲಿದೆ ಎಂದು ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಮಂಜುಳ, ಹುತ್ತದಲ್ಲಿ ಹಾವಿದೆ ಎಂಬ ಕಾರಣಕ್ಕೆ ಅದನ್ನು ತೆಗೆಯಲು ಯಾರು ಬರುತ್ತಿಲ್ಲ, ಮಂಜುನಾಥ ನಗರ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು 7 ಮಕ್ಕಳಿದ್ದಾರೆ. ಶಾಲಾ ದಾಖಲಾತಿ ಹೆಚ್ಚಳಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಶಾಲಾ ಫಲಿತಾಂಶ ಹೆಚ್ಛಳಕ್ಕೆ ಪೈಲಟ್ ಯೋಜನೆ- ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕಾಗಿ ಈ ಬಾರಿ ಕಡಿಮೆ ಫಲಿತಾಂಶವಿರುವ ಸಿಂಗಾನಲ್ಲೂರು ಹಾಗೂ ಎಂಜಿಎಸ್ವಿ ಶಾಲಾ ಹಿಂದಿನ ವೈಭವ ಮರುಕಳಿಸುವ ಹಿನ್ನೆಲೆ 2 ಶಾಲೆಗಳಲ್ಲೂ ಸಹಾ ಪೈಲಟ್ ಮಾದರಿ ಕಾರ್ಯಕ್ರಮ ರೂಪಿಸಲಾಗಿದೆ. ಮೇ20ರಂದು ಶಾಸಕರು ಪಾಲ್ಗೊಳ್ಳಲಿದ್ದಾರೆ. ಕೊಳ್ಳೇಗಾಲ ಉತ್ತಮ ಫಲಿತಾಂಶಗಳಿಸಿ ಜಿಲ್ಲೆಯಲ್ಲೆ 2ನೇ ಸ್ಥಾನದಲ್ಲಿದೆ. ಆದರ್ಶ ಸರ್ಕಾರಿ ಶಾಲೆ ನೂರರಷ್ಟು ಫಲಿತಾಂಶಗಳಿಸಿದೆ. ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ ಎಂದರು.ಯಳಂದೂರು ಆಲ್ಕೆರೆ ಅಗ್ರಹಾರ ಸರ್ಕಾರಿ ಶಾಲೆಯ ಶಾಲಾಭಿವೃದ್ದಿ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಶಾಲೆಯಲ್ಲಿನ ಮಾರ್ಗರೇಟ್ ಮನೋಹರಿ ಎಂಬ ಶಿಕ್ಷಕರು 10.30ಕ್ಕೆ ಬಂದು 3ಗಂಟೆಗೆ ಹೊರಟುಹೋಗುತ್ತಾರೆ, ಅಲ್ಲಿನ ಮಕ್ಕಳ ಕಲಿಕೆ ಪ್ರಗತಿಗೆ ಸಮಿತಿ ಸದಸ್ಯನಾದ ನಾನು ಕೆಲವು ಮಕ್ಕಳಲ್ಲಿ ನಮ್ಮೂರು ಚಾ.ನಗರ ಎಂದು ಬೋರ್ಡ್ನಲ್ಲಿ ಬರೆಯಲು ಹೇಳಿದರೆ ಕೆಲವು ನಾಲ್ಕನೇ ತರಗತಿ ಮಕ್ಕಳಿಗೆ ಕನ್ನಡವನ್ನು ಸರಿಯಾಗಿ ಕಲಿಸಿಲ್ಲ, 5ನೇ ತರಗತಿಯ ಇಬ್ಬರು ಮಕ್ಕಳಿಗೆ ನಮ್ಮೂರಿನ ಹೆಸರು ಬರೆಯಲು ಹೇಳಿದರೆ ಅವರಿಗೂ ಸರಿಯಾದ ರೀತಿ ಬರೆಯಲು ಬರಲ್ಲ , ಕಲಿಕಾ ಪ್ರಮಾಣ ಏಕೆ ಹೀಗಿದೆ ಎಂದು ಪ್ರಶ್ನಿಸಿದರೆ ನಿಮ್ಮ ಕೆಲಸ ನೋಡಿಕೊಂಡು ಹೋಗಿ, ಜಾಸ್ತಿ ಮಾತನಾಡಿದರೆ ನಿಮ್ಮ ಮೇಲೆ ದೂರು ಕೊಡುವೆ ಎಂದು ಬೆದರಿಕೆ ಹಾಕುತ್ತಾರೆ ಎಂದರು.
ಯಳಂದೂರು ಬಿಇಒ ಗಮನಕ್ಕೆ ತಂದರೂ ಅವರ ಕಾರ್ಯವೈಖರಿ ಬದಲಾಗಿಲ್ಲ, ಅವರು 2 ವರ್ಷಗಳಿಂದಲೂ ಇದೆ ಶಾಲೆಯಲ್ಲಿದ್ದಾರೆ, ಅವರಿಂದಲೇ ಮಕ್ಕಳ ಕಲಿಕೆ ಹಿನ್ನಡೆಯಾಗುತ್ತಿದ್ದು ಕ್ರಮಕೈಗೊಳ್ಳಬೇಕು ಎಂದು ಡಿವೈಪಿಸಿ ನಾಗೇಂದ್ರ ಅವರಿಗೆ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಪಿಸಿ ನಾಗೇಂದ್ರ, ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು, ಕಲಿಕಾ ಪ್ರಗತಿ ಕ್ಷೀಣಿಸಿದ್ದಲ್ಲಿ ಅಧಿಕಾರಿಗಳಿಗೆ ವರದಿ ಸಲ್ಲಿಸುವೆ ಎಂದರು.ನಮ್ಮೆಲ್ಲ ಪ್ರಶ್ನೆಗಳಿಗೆ ಡಿವೈಪಿಸಿ ನಾಗೇಂದ್ರರಿಂದ ಉತ್ತರ ಅಸಾಧ್ಯ. ಸ್ಥಳಕ್ಕೆ ಡಿಡಿಪಿಐ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಡಿವೈಪಿಸಿ ನಾಗೇಂದ್ರ, ಡಿಡಿಪಿಐ ಜಿಲ್ಲಾಮಟ್ಟದ ಸಭೆಯಲ್ಲಿದ್ದಾರೆ, ವಿಚಾರ ಗಮನಕ್ಕೆ ತಂದಿರುವೆ ಎಂದರು. ಇದಕ್ಕೊಪ್ಪದ ರೈತರು ಅವರು ಸ್ಥಳಕ್ಕೆ ಬರಲೇಬೇಕು, ಅವರಿಂದಲೇ ಅನ್ಯಾಯಕ್ಕೊಳಗಾವದವರಿಗೆ ನ್ಯಾಯ ಸಿಗಬೇಕು, ಫಲಿತಾಂಶ ಸುಧಾರಣೆಗೆ ದಿಟ್ಟ ಉತ್ತರ ಬೇಕು ಎಂದು ಆಗ್ರಹಿಸಿದರು. ನಂತರ ಒಂದು ವಾರ ಬಿಇಒ ಕಾಲವಕಾಶ ಕೇಳಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು.