ಕನ್ನಡಪ್ರಭ ವಾರ್ತೆ ತಿಪಟೂರು
ಬೈಪಾಸ್ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಕೆಲವೆ ತಿಂಗಳುಗಳಲ್ಲೇ ರಸ್ತೆಯಲ್ಲಿ ಕುಸಿತವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಕಾಂಕ್ರಿಟ್, ಕಬ್ಬಿಣ, ಸಿಮೆಂಟ್ ಸೇರಿದಂತೆ ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು ರಸ್ತೆ ಕುಸಿಯಲು ಕಾರಣವಾಗಿದೆ. ಹೆದ್ದಾರಿಯಲ್ಲಿ ಕುಸಿತವಾಗಿರುವ ಸ್ಥಳದ ಪಕ್ಕದಲ್ಲೆಯೇ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಇದ್ದು ಭಾರಿ ವಾಹನಗಳು ಸಂಚರಿಸುವಾಗ ಬ್ರಿಡ್ಜ್ ಕಂಪನವಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ. ಮೂರ್ನಾಲ್ಕು ಕಡೆ ರಸ್ತೆ ಕುಸಿತವಾಗಿರುವ ಕಾರಣ ಹೆದ್ದಾರಿ ಗುತ್ತಿಗೆದಾರರು ತಾತ್ಕಾಲಿಕ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೋಟ್ಯಂತರ ರು. ಹಣ ಖರ್ಚು ಮಾಡಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದ್ದರೆ ಖರ್ಚು ಮಾಡುತ್ತಿರುವ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು ಸರ್ಕಾರ ಈ ಬಗ್ಗೆ ರಸ್ತೆ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳದೆ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಲುಕಾರಣವಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ಬಾರಿ ಹಾಗೂ ಲಘು ವಾಹನಗಳು ಓಡಾಡುವುದರಿಂದ ದೊಡ್ಡ ಅವಘಡಗಳು ಸಂಭವಿಸಿದರೆ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಜವಾಬ್ದಾರವಾಗಬೇಕಾಗಿದ್ದು ಸುಖಾಸುಮ್ಮನೆ ಅಮಾಯಕರ ಜೀವಗಳು ಬಲಿಯಾಗಬೇಕಾಗಿರುವುದರಿಂದ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸಂಪೂರ್ಣ ಕಾಮಗಾರಿ ಪರಿಶೀಲನೆ ಮಾಡಬೇಕು. ಕಳಪೆ ಕಾಮಗಾರಿಯಾಗಿದ್ದಲ್ಲಿ ಈಗಲೆ ಕಠಿಣ ಕ್ರಮ ಜರುಗಿಸಿ ಮರು ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.