ಕನ್ನಡಪ್ರಭ ವಾರ್ತೆ ಹುನಗುಂದ
ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಿದ ತೊಗರಿ ಬೀಜ ಕಳಪೆಯಾಗಿದೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದ್ದು ಕೂಡಲೇ ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಂಡು ಹಾನಿಗೀಡಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ರೈತ ಸಂಘದಿಂದ ಹುನಗುಂದ ಸಹಾಯಕ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಲಾಯಿತು.ಸಂಘದ ಅಧ್ಯಕ್ಷ ನಾಗರಾಜ ಹೂಗಾರ ಮಾತನಾಡಿ, ಇಂದವಾರ ಗ್ರಾಮದ ಶಿವಣ್ಣ ಕುರಬರ ಅವರ 6 ಎಕರೆಯಲ್ಲಿ ಕೃಷಿ ಇಲಾಖೆಯಿಂದ ಕರಡಿ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿದ ತೊಗರಿ ಬೀಜವು ಸಂಪೂರ್ಣ ಕಳಪೆಯಾಗಿದೆ. ಹೀಗಾಗಿ ಗಿಡಗಳು ಬೀಜ ಕಟ್ಟಿಲ್ಲ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪ್ರತಿ ಎಕರೆಗೆ ₹50 ಸಾವಿರ ಖರ್ಚು ಮಾಡಿದ್ದು, ಈ ಮೊದಲೇ ರೈತರು ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೇ ಚಿಂತೆಗೀಡಾಗಿದ್ದಾರೆ. ಈಗ ಕಳಪೆ ತೊಗರಿ ಬೀಜ ವಿತರಣೆ ಮಾಡಿರುವುದರಿಂದ ಮತ್ತಷ್ಟು ಹಾನಿಯಾಗಿದೆ. ಎಜೆನ್ಸಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದರು.
ರೈತರಿಗೆ ಬೀಜ ವಿತರಿಸುವಾಗ ಸರಿಯಾದ ಮಾಹಿತಿ ನೀಡಬೇಕು. ಕಳಪೆ ಬೀಜ ವಿತರಿಸಿದ ಕಂಪನಿ ವಿರುದ್ಧ ಹಾಗೂ ಇದಕ್ಕೆ ಬೆಂಬಲ ನೀಡಿದ ಅಧಿಕಾರಿಗಳ ಮೇಲೂ ಸೂಕ್ತ ಕ್ರಮ ಜರುಗಿಸಬೇಕು. ನಷ್ಟಗೊಂಡ ರೈತರಿಗೆ ಬೆಳೆ ಪರಿಹಾರ ಅಥವಾ ಬೆಳೆ ವಿಮೆ ನೀಡುವಲ್ಲಿ ಏನಾದರೂ ಗೋಲಮಾಲ್ ಮಾಡಿದ್ದೆ ಆದರೆ ಅಖಿಲ ಕರ್ನಾಟಕ ರಾಜ್ಯ ರೈತ ಸಂಘದಿಂದ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ರೈತ ಸಂಘದ ಗೌರವ ಅಧ್ಯಕ್ಷ ವೀರನಗೌಡ ಪಾಟೀಲ, ಬಸನಗೌಡ ದಾದ್ಮಿ, ರುದ್ರಪ್ಪ ಬೆನಕನಡೋಣಿ, ಬಿರಪ್ಪ ಕುರಬರ, ಬಸವರಾಜ ಕುಂಬಾರ, ಸುರೇಶ ಕುಂಬಾರ, ಮಲಕಾಜಪ್ಪ ಕುಂಬಾರ, ಅಮರೇಶ ಬಾರಕೇರ, ಮುತ್ತಪ್ಪ ಬೆನಕಟ್ಟಿ ಇತರರು ಇದ್ದರು.