ಕಳಪೆ ಕಾಮಗಾರಿ: ಕಿತ್ತು ಹೋದ ಕಾಂಕ್ರಿಟ್‌ ರಸ್ತೆ

KannadaprabhaNewsNetwork |  
Published : Feb 15, 2025, 12:31 AM IST
ತೀರಾ ಕಳಪೆ | Kannada Prabha

ಸಾರಾಂಶ

ಪದೇಪದೆ ದುರಸ್ತಿ ಕಾರ್ಯ ತಪ್ಪಿಸುವುದಕ್ಕಾಗಿ ಹಾಗೂ ದೀರ್ಘಕಾಲಿಕ ಬಾಳಿಕೆಗಾಗಿ ರಸ್ತೆಗೆ ಡಾಂಬರಿನ ಬದಲು ಕಾಂಕ್ರಿಟ್‌ ಕಾಮಗಾರಿ ಮಾಡಲಾಗುತ್ತಿದೆ. ಅಂತೆಯೇ ಉಪ್ಪಿನಂಗಡಿಯ ನಟ್ಟಿಬೈಲು-ರಾಮನಗರ ಸಂಪರ್ಕ ರಸ್ತೆಯನ್ನು ತೀರಾ ಕಳಪೆಯಾಗಿ ನಡೆಸಿದ ಪರಿಣಾಮ ರಸ್ತೆ ಕಿತ್ತು ಹೋಗಿ ಅಪಾಯಕಾರಿಯಾಗಿ ಪರಿಣಮಿಸಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪದೇಪದೆ ದುರಸ್ತಿ ಕಾರ್ಯ ತಪ್ಪಿಸುವುದಕ್ಕಾಗಿ ಹಾಗೂ ದೀರ್ಘಕಾಲಿಕ ಬಾಳಿಕೆಗಾಗಿ ರಸ್ತೆಗೆ ಡಾಂಬರಿನ ಬದಲು ಕಾಂಕ್ರಿಟ್‌ ಕಾಮಗಾರಿ ಮಾಡಲಾಗುತ್ತಿದೆ. ಅಂತೆಯೇ ಉಪ್ಪಿನಂಗಡಿಯ ನಟ್ಟಿಬೈಲು-ರಾಮನಗರ ಸಂಪರ್ಕ ರಸ್ತೆಯನ್ನು ತೀರಾ ಕಳಪೆಯಾಗಿ ನಡೆಸಿದ ಪರಿಣಾಮ ರಸ್ತೆ ಕಿತ್ತು ಹೋಗಿ ಅಪಾಯಕಾರಿಯಾಗಿ ಪರಿಣಮಿಸಿದೆ.ಸುಮಾರು ೮ ವರ್ಷಗಳ ಹಿಂದೆ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಒದಗಿಸಿದ ಅನುದಾನದಲ್ಲಿ ನಿರ್ಮಿಸಲಾದ ಈ ಕಾಂಕ್ರಿಟ್‌ ರಸ್ತೆಯ ಬಗ್ಗೆ ಸ್ಥಳೀಯರಿಗೆ ತೀವ್ರ ಕಾಳಜಿ ಇತ್ತು. ಕಾಂಕ್ರಿಟ್‌ ಕಾಮಗಾರಿ ನಿಗದಿತ ಅವಧಿಯಲ್ಲಿ ಯಾವೊಂದೂ ವಾಹನವೂ ಅದರಲ್ಲಿ ಸಂಚರಿಸದಂತೆ ಸ್ಥಳೀಯ ನಿವಾಸಿಗರು ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಮಾತ್ರವಲ್ಲದೆ ದಿನವೂ ನೀರುಣಿಸಿ ರಸ್ತೆ ಗಟ್ಟಿಯಾಗುವಂತೆ ನೋಡಿಕೊಂಡಿದ್ದರು.ಆದರೆ ಕಾಮಗಾರಿ ಕಳಪೆಯಾಗಿ ನಡೆಸಿದ ಕಾರಣಕ್ಕೆ ಕಾಮಗಾರಿ ನಡೆಸಿ ೬ ತಿಂಗಳಾಗುತ್ತಿದ್ದಂತೆಯೇ ಬಿರುಕು, ರಸ್ತೆಯ ಮೇಲ್ಪದರು ಕರಗತೊಡಗಿತು. ಕಳಪೆ ಕಾಮಗಾರಿ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾಗುತ್ತಿದ್ದಂತೆ ಅದರ ಮೇಲೊಂದು ಸಿಮೆಂಟ್ ಕೋಟಿಂಗ್ ಹಾಕಲಾಗಿತ್ತು. ಆದರೆ ದಿನಗಳು ಉರುಳಿದಂತೆ ರಸ್ತೆ ನಿಧಾನಗತಿಯಲ್ಲಿ ಕರಗತೊಡಗಿದ್ದು, ರಸ್ತೆಯಂಚಿನಲ್ಲಿ ಕಾಂಕ್ರೀಟ್ ತುಂಡರಿಸತೊಡಗಿ ಈ ಭಾಗದಲ್ಲಿ ಸಂಚಾರವೇ ದುಸ್ತರವಾಗುವಂತಾಗಿದೆ.ಕಳಪೆ ಕಾಮಗಾರಿ ಬಗ್ಗೆ ಸಕಾಲದಲ್ಲಿ ಎಚ್ಚರಿಸಿದ್ದರೂ ಆಡಳಿತ ವ್ಯವಸ್ಥೆ ಮೌನ ತಾಳಿರುವುದು, ಒಟ್ಟು ಕಾಮಗಾರಿ ನಡೆಯುವುದು ಸಮಾಜದ ಹಿತಕ್ಕಿಂತ ಮುಖ್ಯ ಗುತ್ತಿಗೆದಾರರ ಹಿತ ಕಾಯಲು ಎಂಬಂತಾಗಿದೆ. ಇದೇ ರಸ್ತೆಯ ಉಳಿದ ಭಾಗವನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದು, ಈತನಕ ಸುಸ್ಥಿಯಲ್ಲಿದೆ. ಇಡೀ ರಸ್ತೆಯ ಗುತ್ತಿಗೆ ಹೊಣೆಯನ್ನು ಹೊರಭಾಗದ ಮಂದಿ ನಿರ್ವಹಿಸಿದ್ದಲ್ಲಿಯೇ ಕಳಪೆಯ ಲೋಪ ಕಾಣಿಸಿರುವುದು ಗಮನಿಸಬೇಕಾದ ಅಂಶ.

..................

ಶಾಸಕರ ಅನುದಾನದಲ್ಲಿ ಈ ಭಾಗದ ರಸ್ತೆಯ ನಿರ್ಮಾಣ ಕಾರ್ಯವನ್ನು ಪುತ್ತೂರಿನ ಗುತ್ತಿಗೆದಾರ ನಿರ್ವಹಿಸಿದ ಬಗ್ಗೆ ಪಂಚಾಯಿತಿ ದಾಖಲೆಯಲ್ಲಿದೆ. ರಸ್ತೆ ಪ್ರಸಕ್ತ ಅಪಾಯಕಾರಿಯಾಗಿರುವುದರಿಂದ ಪಂಚಾಯಿತಿ ವತಿಯಿಂದಲೇ ರಸ್ತೆ ದುರಸ್ತಿಗೊಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.

। ಲಾರೆನ್ಸ್‌ ವಿಲ್ಫ್ರೆಡ್‌ ರೋಡ್ರಿಗಸ್‌, ಪಿಡಿಒ

----------------

ಶಾಲಾ ವಾಹನಗಳೂ ಸಂಚರಿಸುವ ಈ ರಸ್ತೆಯನ್ನು ದೀರ್ಘಕಾಲ ಸುರಕ್ಷಿತವಾಗಿರಿಸುವ ಕಾರಣಕ್ಕೆ ಸರ್ಕಾರದ ಅನುದಾನ ಒದಗಿಸಿ ಕಾಂಕ್ರಿಟ್‌ ಕಾಮಗಾರಿ ಮಾಡಲಾಯಿತು. ಈ ಮಟ್ಟದ ಕಳಪೆ ಕಾಮಗಾರಿಯನ್ನು ನಡೆಸಿದ ಗುತ್ತಿಗೆದಾರನಿಂದಲೇ ನಷ್ಟ ವಸೂಲಿ ಮಾಡುವ ವ್ಯವಸ್ಥೆ ಇರಬೇಕು. ಪ್ರಸಕ್ತ ವಾಹನ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪಂಚಾಯಿತಿ ಅನುದಾನ ಬಳಸಿ ಈ ರಸ್ತೆಯ ಕೆಟ್ಟು ಹೋದ ಭಾಗದಲ್ಲಿ ಮರು ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು.

। ಧನಂಜಯ್ ನಟ್ಟಿಬೈಲು, ಗ್ರಾ.ಪಂ. ಸದಸ್ಯ

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?