ಕೃಷಿ ವಿಜ್ಞಾನಿ ಶಿವಶಂಕರ್ ಅಭಿಮತ । ‘ತಾರಸಿ ಕೃಷಿ ಏಕೆ? ಹೇಗೆ?’ ವಿಚಾರ ಸಂಕಿರಣ, ಸಂವಾದ ।
ಬಡವರ ಊಟಿ ಆಗಿದ್ದ ಹಾಸನ ಇಂದು ಆಧುನಿಕತೆಯ ಹೆಸರಿನಲ್ಲಿ ತತ್ತರಿಸುತ್ತಿದೆ. ತಿನ್ನುವ ಆಹಾರ ಈಗ ನೈಸರ್ಗಿಕವಾಗಿಲ್ಲ. ವ್ಯಾಪಾರದ ಕಾರಣಕ್ಕೆ ಕೃತಕವಾಗಿ ತಯಾರಿಸಿದ ಹೈಬ್ರಿಡ್ ತಳಿಗಳಾಗಿದ್ದು, ಅವು ಕ್ರಿಮಿನಾಶಕಗಳ ಅವಲಂಬನೆಯಿಂದ ಪೋಷಕತೆಗಿಂತ ವಿಷಯುಕ್ತವೇ ಹೆಚ್ಚಾಗಿರತ್ತದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಶಿವಶಂಕರ್ ಕಳವಳ ವ್ಯಕ್ತಪಡಿಸಿದರು.
ನಗರದ ವಿಜಯ ನಗರ ಬಡಾವಣೆಯ ಮಹಾತ್ಮಗಾಂದಿ ಉದ್ಯಾನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲೂಕು ಸಮಿತಿ, ಸ್ನೇಹ ಸಮ್ಮಿಲನ, ವಿಜಯನಗರ ಬಡಾವಣೆ ಕ್ಷೇಮಾಭವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಜಂಟಿಯಾಗಿ ಬಿಜಿವಿಎಸ್ ಸದಸ್ಯತ್ವ ಆಂದೋಲನದ ಅಂಗವಾಗಿ ‘ತಾರಸಿ ಕೃಷಿ ಏಕೆ? ಹೇಗೆ?’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ನಮ್ಮ ವೈಯುಕ್ತಿಕ ಆರೋಗ್ಯದ ಹಿತದೃಷ್ಠಿಯಿಂದ ಮನೆಯಂಗಳದಲ್ಲೇ ದೈನದಂದಿನ ಬದುಕಿಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಂಡು ಹೆಚ್ಚು ಪೋಷಕಯುಕ್ತ ಆಹಾರ ಪದಾರ್ಥವನ್ನು ಅಗ್ಗದ ದರದಲ್ಲಿ ಪಡೆಯಬಹುದು’ ಎಂದು ಹೇಳುತ್ತ ಹೆಚ್ಚಿನ ಇಳುವರಿಗಾಗಿ ಉಪಯೋಗಿಸುವ ರಸಗೊಬ್ಬರದಿಂದ ದೇಹದಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಸಿ ಅಂಗಳ ಕೃಷಿ ಉಪಯೋಗದ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು.
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ, ‘ಭೂಮಿ ಇಂದು ಎದುರಿಸುತ್ತಿರುವ ಪರಿಸರ ಸಮಸ್ಯೆಗೆ ಈ ನೆಲದ ಪ್ರತಿಯೊಬ್ಬ ನಾಗರಿಕ ನೀಡುವ ಕೊಡುಗೆ ಎಂದರೆ ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಕ್ಕೆ ಮನೆಯಲ್ಲೇ ವೈಜ್ಞಾನಿಕವಾಗಿ ಕಸದಿಂದ ರಸ ಮಾಡುವ ಪರಿಜ್ಞಾನ ಬೆಳೆಸಿಕೊಳ್ಳುವುದಾಗಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದಲ್ಲಿ ಶೇಕಡ ೬೫ ಜೈವಿಕವಾಗಿ ಕರಗುವಂತಹದ್ದು. ಇವುಗಳನ್ನು ಮನೆಯಲ್ಲೇ ಒಂದು ಬಕೆಟ್ ಅಥವಾ ಚೀಲದ ಮೂಲಕ ಸಾವಯವ ಗೊಬ್ಬರ ಮೂಲಕ ಮನೆಯ ಅಂಗಳದಲ್ಲಿ ನಾಲ್ಕೈದು ಪಾಟ್ ಇಟ್ಟು ಅಂಗಳ ಕೃಷಿ ಮಾಡಿ ಪೋಷಕ ಆಹಾರ ಪಡೆಯುವುದರ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದು’ ಎಂದು ಸಲಹೆ ನೀಡಿದರು.
ಬಿಜಿವಿಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷೆ ರಾಧಾ ನಿರೂಪಿಸಿದರು. ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ವನಜಾಕ್ಷಿ ಸ್ವಾಗತಿಸಿದರು. ಸ್ನೇಹ ಸಮ್ಮಿಲನದ ಸರಳಾ ವಂದಿಸಿದರು.