ಪ್ರಧಾನಮಂತ್ರಿ ಜನ ಮನ್ ಯೋಜನೆಗೆ ಪೂವನಹಳ್ಳಿ ಗ್ರಾಮ ಆಯ್ಕೆ

KannadaprabhaNewsNetwork |  
Published : Jan 25, 2025, 01:00 AM IST
24ಕೆಎಂಎನ್ ಡಿ22,23 | Kannada Prabha

ಸಾರಾಂಶ

ಶಿಥಿಲವಾಗಿರುವ ಶಾಲಾ ಕಟ್ಟಡದಲ್ಲಿ 35 ಮಕ್ಕಳು 1 ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಇಬ್ಬರು ಶಿಕ್ಷಕರು ಪಾಠ, ಪ್ರವಚನ ಮಾಡುತ್ತಿದ್ದಾರೆ. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 13 ಮಕ್ಕಳು ಸಮಗ್ರ ಶಿಶು ಕಲ್ಯಾಣ ಯೋಜನಾ ಕಾರ್ಯಕ್ರಮದ ಫಲವನ್ನು ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಧಾನಮಂತ್ರಿ ಜನ ಮನ್ ಯೋಜನೆಗೆ ತಾಲೂಕಿನ ಪೂವನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಸಂಸದರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆ ಮೇರೆಗೆ

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಪಂ ವ್ಯಾಪ್ತಿಯ ಸಂಪೂರ್ಣ ಪರಿಶಿಷ್ಟ ವರ್ಗಗಳ ಜನರೇ ವಾಸವಾಗಿರುವ ಪೂವನಹಳ್ಳಿಯನ್ನು ಪ್ರಧಾನ ಮಂತ್ರಿ ಜನ್ ಮನ್ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಯೋಜನೆಯಿಂದ 15 ಇಲಾಖೆಗಳ 25 ಸೇವಾ ಕಾರ್ಯಕ್ರಮಗಳು ಗ್ರಾಮದ ಜನರಿಗೆ ದೊರೆತು ಸುಸ್ಥಿರ, ಸದೃಢ ಗ್ರಾಮ ನಿರ್ಮಾಣದ ಕನಸು ಸಾಕಾರವಾಗಲಿದೆ. ಇದರಿಂದ ಸಂಪೂರ್ಣವಾಗಿ ಹಿಂದುಳಿದ ಬುಡಕಟ್ಟು ಜನಾಂಗದ ವಾಲ್ಮೀಕಿ ನಾಯಕ ಸಮುದಾಯದ ಜನರೇ ವಾಸವಾಗಿರುವ ಕನಿಷ್ಠ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮದಲ್ಲಿ ಹೊಸ ಬೆಳಕು ಮೂಡಿದೆ.

ಗ್ರಾಮದ ಭಾಗ್ಯದ ಬಾಗಿಲು ತೆರೆಯಲಿರುವುದರಿಂದ ಗ್ರಾಮದ ಜನರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ಮತ್ತು ತಮ್ಮ ಗ್ರಾಮದ ಬಗ್ಗೆ ಕುಮಾರಸ್ವಾಮಿಯವರ ಗಮನ ಸೆಳೆದ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಪೂವನಹಳ್ಳಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದರೂ ರಾಜಕೀಯವಾಗಿ ಶಕ್ತಿಯುತ. ಕಳೆದ ಅವಧಿಯಲ್ಲಿ ಇದೇ ಗ್ರಾಮದ ಗಾಯಿತ್ರಿ ರೇವಣ್ಣ ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿ ಮಂಡ್ಯ ಜಿಪಂ ಉಪಾಧ್ಯಕ್ಷರಾಗಿದ್ದರು. ಇವರಂತೆಯೇ ಇದೇ ಗ್ರಾಮದ ಜಯಲಕ್ಷ್ಮೀ ಸ್ವಾಮಿ ನಾಯಕ್ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಕೆ.ಆರ್.ಪೇಟೆ ತಾಪಂ ಅಧ್ಯಕ್ಷರಾಗಿದ್ದರು.

ಪೂವನಹಳ್ಳಿಯಲ್ಲಿ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಇಲ್ಲದಿರುವುದರಿಂದ ಗ್ರಾಮದ 300 ಕುಟುಂಬಗಳು 4 ಕಿಮೀ ದೂರದ ಗಂಜಿಗೆರೆ ಗ್ರಾಪಂ ಕೇಂದ್ರದಲ್ಲಿರುವ ಸೊಸೈಟಿಗೆ ಅನಿವಾರ್ಯವಾಗಿ ಹೋಗಬೇಕಾಗಿದೆ. ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೀಡಾದರೆ 12 ಕಿಮೀ ದೂರದ ಬೂಕನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ 28 ಕಿಮೀ ದೂರದ ಕೆ.ಆರ್.ಪೇಟೆ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಅನಿವಾರ್ಯತೆಯಿದೆ.

ಶಿಥಿಲವಾಗಿರುವ ಶಾಲಾ ಕಟ್ಟಡದಲ್ಲಿ 35 ಮಕ್ಕಳು 1 ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಇಬ್ಬರು ಶಿಕ್ಷಕರು ಪಾಠ, ಪ್ರವಚನ ಮಾಡುತ್ತಿದ್ದಾರೆ. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 13 ಮಕ್ಕಳು ಸಮಗ್ರ ಶಿಶು ಕಲ್ಯಾಣ ಯೋಜನಾ ಕಾರ್ಯಕ್ರಮದ ಫಲವನ್ನು ಪಡೆಯುತ್ತಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ಮಾತ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗ್ರಾಮಕ್ಕೆ ಆಗಮಿಸುತ್ತಿದೆ. ಆದ್ದರಿಂದ ನಿಯಮಿತವಾಗಿ ಗ್ರಾಮಕ್ಕೆ ಆಗಮಿಸಿ ಸುಸಜ್ಜಿತವಾದ ಸಾರಿಗೆ ಸೌಲಭ್ಯ ದೊರೆಯಬೇಕು. ಗ್ರಾಮಕ್ಕೆ ಹೊಸ ಸ್ಪರ್ಶ ಸಿಗಬೇಕು. ಶುದ್ಧ ಕುಡಿಯುವ ನೀರು ಗ್ರಾಮದ ಜನರಿಗೆ ದೊರೆತು ಶಿಕ್ಷಣ, ಆರೋಗ್ಯ, ವಿದ್ಯುತ್ ಹಾಗೂ ಪಂಚಾಯತ್ ರಾಜ್ ಯೋಜನೆಯ ಎಲ್ಲಾ ಸೌಲಭ್ಯಗಳು ಜನ್ ಮನ್ ಯೋಜನೆ ಮೂಲಕ ಗ್ರಾಮಕ್ಕೆ ತಲುಪಬೇಕು ಎಂದು ಗ್ರಾಮದ ಜನರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!