- ಮಣ್ಣಿನ ಮೂರ್ತಿಗಳನ್ನೇ ಪೂಜಿಸಬೇಕು । ಗಣೇಶ ಮೂರ್ತಿ ತಯಾರಿಸುವ ಸ್ಥಳಕ್ಕೆ ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು. ಮಣ್ಣಿನ ಮೂರ್ತಿಗಳನ್ನೇ ಪೂಜಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಆಯುಕ್ತರು ಮತ್ತು ಸಿಬ್ಬಂದಿಗಳೊಂದಿಗೆ ಗುರುವಾರ ನಗರದ ಬಸವನಹಳ್ಳಿಯ ಕುಂಬಾರ ಬೀದಿ ಬಡಾವಣೆಯಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.ನಗರದ ಕೋಟೆ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ವ್ಯವಸ್ಥೆ ನಗರಸಭೆಯಿಂದ ಮಾಡಲಾಗಿದೆ. ಹೂವು ಮತ್ತು ಪೂಜಾ ಸಾಮಾಗ್ರಿಗಳನ್ನು ನೀರಿಗೆ ಬಿಡಬಾರದು ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಪರಿಶೀಲನೆ ವೇಳೆ ಯಾರೂ ಸಹ ಪಿಓಪಿ ಮೂರ್ತಿಗಳನ್ನು ತಯಾರಿಸುವುದಾಗಲಿ, ಬಳಸುವುದಾಗಲಿ ಕಂಡು ಬಂದಿಲ್ಲ. ಈ ಹಿಂದೆಯೂ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಮಣ್ಣಿನಿಂದಲೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದು ಖುಷಿಯ ವಿಚಾರ ಎಂದರು.ನಗರದ ಕೊಟೆ ಕೆರೆಯಲ್ಲಿ ಗಣಪತಿಗಳನ್ನು ವಿಸರ್ಜಿಸಲು ಕಲ್ಯಾಣಿಯನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ಬೇರೆ, ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಬಾರದು ಎಂದು ತಿಳಿಸಿದರು.ಇದಲ್ಲದೆ ನಗರದ ಹನುಮಂತಪ್ಪ ಸರ್ಕಲ್, ಆಜಾದ್ ಪಾರ್ಕ್ ಸರ್ಕಲ್, ದಂಡರಮಕ್ಕಿ ಕೆರೆ ಬಳಿ, ಟೌನ್ ಕ್ಯಾಂಟೀನ್ ಸರ್ಕಲ್ ಮತ್ತು ಮಲ್ಲಂದುರು ರಸ್ತೆಗಳಲ್ಲಿ ಗಣೇಶ ವಿಸರ್ಜನೆಗೆ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುವುದು. ಜನತೆ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಅಲ್ಲಿಯೇ ವಿಸರ್ಜಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೋಟೆ ಕೆರೆಯಲ್ಲಿ ವಿಸರ್ಜನೆ ಮಾಡುವುದು ಸೂಕ್ತ ಎಂದರು.ಗಣೇಶೋತ್ಸವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ 2 ಸಭೆಗಳನ್ನು ನಡೆಸಲಾಗಿದೆ. ಹೊರ ಜಿಲ್ಲೆಗಳಿಂದ ಪಿಓಪಿ ಗಣೇಶ ಮೂರ್ತಿಗಳನ್ನು ತರಿಸಬಾರದು ಎನ್ನುವ ಉದ್ದೇಶದಿಂದ ಜಿಲ್ಲೆ ಮತ್ತು ತಾಲೂಕಿನ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಪೊಲೀಸರನ್ನು ನೇಮಿಸಿ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.ಇದನ್ನು ಮೀರಿ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ. ಇದಕ್ಕಾಗಿ ನಗರಸಭೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಎಲ್ಲಾ ಇಲಾಖೆಗೆ ಸಂಬಂಧಿಸಿದ ಪರವಾನಗಿ ಪಡೆಯಬಹುದು ಎಂದು ತಿಳಿಸಿದರು. ನಗರಸಭಾ ಸದಸ್ಯ ಎ.ಸಿ.ಕುಮಾರ್ ಮಾತನಾಡಿ, ನಗರಸಭೆ ಪ್ಲಾಸ್ಟಿಕ್ ಮುಕ್ತ ಮತ್ತು ಕಸ ಮುಕ್ತ ನಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ತೇಜಸ್ವಿನಿ, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ರಂಗಪ್ಪ, ಈಶ್ವರ್, ವೆಂಕಟೇಶ್, ಅಣ್ಣಯ್ಯ ಇದ್ದರು.--- ಬಾಕ್ಸ್ --ಗಣಪತಿ ಪೆಂಡಾಲ್‌ನಲ್ಲಿ ಅಗ್ನಿ ನಿರೋಧಕ ಜಿಂಕ್‌ಶೀಟ್ ಬಳಸಲು ಸಲಹೆಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಪೆಂಡಾಲ್ ಚಪ್ಪರ ನಿರ್ಮಿಸುವಾಗ ಅಗ್ನಿ ನಿರೋಧಕ ವಸ್ತುಗಳಾದ ಜಿಂಕ್‌ಶೀಟ್ ಇತ್ಯಾದಿ ಬಳಸಬೇಕು. ಹಾಗೆಯೇ ಅಗ್ನಿ ನಿರೋಧಕ ವಸ್ತುಗಳನ್ನು ಉಪಯೋಗಿಸಿ ಪೆಂಡಾಲ್‌ನ ಒಳ ಅಲಂಕಾರ ಮಾಡಬೇಕು ಎಂದು ಅಗ್ನಿಶಾಮಕ ಇಲಾಖೆ ಸೂಚಿಸಿದೆ.
ಪೆಂಡಾಲ್ ನಿರ್ಮಿಸುವಾಗ ಅನುಸರಿಸಲು ಕರ್ನಾಟಕ ರಾಜ್ಯ ಅಗ್ನಿಶಾಮಕ 3 ತುರ್ತು ಸೇವೆಗಳ ಇಲಾಖೆಯಿಂದ ನಿರ್ದಿಷ್ಟ ವಾಗಿ ಕೆಲವು ನಿರ್ದೇಶನ ನೀಡಲಾಗಿದೆ. ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಪ್ರದೇಶದಲ್ಲಿ ಗಣಪತಿ ಪೆಂಡಾಲ್ ಗಳನ್ನು ನಿರ್ಮಿಸುವಾಗ ಈ ಸಲಹೆಗಳನ್ನು ಕಡ್ಡಾಯವಾಗಿ ಅನುಸರಿಸಲು ತಿಳಿಸಲಾಗಿದೆ.ಅಗ್ನಿನಂದಕ ವ್ಯವಸ್ತೆ ಕಡ್ಡಾಯ: ಪ್ರತಿ ಪೆಂಡಾಲಿನ ಸಮೀಪ 9 ಲೀ. ಸಾಮರ್ಥ್ಯದ 2 ವಾಟರ್ ಸಿಒ2 ಅಗ್ನಿನಂದಕ ಮತ್ತು ಡಿಸಿಪಿ ಅಗ್ನಿನಂದಕ ಮತ್ತು ಮರಳು ತುಂಬಿದ ತಲಾ 4 ಬಕೆಟ್‌ಗಳನ್ನು ಇಟ್ಟಿರಬೇಕು. ಪೆಂಡಾಲ್ ಹತ್ತಿರ 400 ಲೀ. ಸಾಮರ್ಥ್ಯದ ಡ್ರಮ್‌ನಲ್ಲಿ ನೀರು ತುಂಬಿಟ್ಟಿರಬೇಕು ಎಂದು ಸೂಚಿಸಲಾಗಿದೆ.ಪೆಂಡಾಲ್ ಒಳಭಾಗ ಮತ್ತು ಹತ್ತಿರದಲ್ಲಿ ಸಾರ್ವಜನಿಕರು ಧೂಮಪಾನ ಮಾಡದಂತೆ ಎಚ್ಚರ ವಹಿಸಬೇಕು ಮತ್ತು ಧೂಮಪಾನ ನಿಷೇಧಿಸಿದೆ ಎಂಬ ನಾಮಫಲಕ ಸೂಕ್ತ ಸ್ಥಳಗಳಲ್ಲಿ ನೇತು ಹಾಕಿರಬೇಕು. ಪೆಂಡಾಲ್‌ನ ಸುತ್ತ 12 ಅಡಿ ಸುತ್ತಳತೆ ಖಾಲಿ ಜಾಗವಿರುವಂತೆ ಪೆಂಡಾಲ್ ನಿರ್ಮಿಸಿರಬೇಕು. ಪೆಂಡಾಲ್‌ನಲ್ಲಿ ಸ್ಫೋಟಕ ವಸ್ತುಗಳು, ಸಿಡಿ ಮದ್ದು ಇತ್ಯಾದಿ ವಸ್ತುಗಳನ್ನು ಶೇಖರಿಸಬಾರದು ಮತ್ತು ಪೆಂಡಾಲ್‌ನ ಹತ್ತಿರ ಪಟಾಕಿ ಸಿಡಿಸಬಾರದು. ವಿದ್ಯುತ್ ಸಂಪರ್ಕವನ್ನು ನುರಿತ ವಿದ್ಯುತ್ ಕೆಲಸಗಾರರಿಂದ ಮಾಡಿಸಬೇಕು. ತೆರೆದ ವೈರ್‌ಗಳನ್ನು ಜೋತು ಹಾಕಬಾರದೆಂದು ಸೂಚಿಸಲಾಗಿದೆ. ವಿದ್ಯುತ್ ಸಂಪರ್ಕದ ಹತ್ತಿರ 2 ಕೆಜಿ ಸಾಮರ್ಥ್ಯದ ಸಿಒ2 ಅಗ್ನಿ ನಂದಕ ಇಡುವಂತೆ ಸೂಚಿಸಲಾಗಿದೆ. 21 ಕೆಸಿಕೆಎಂ 4ಚಿಕ್ಕಮಗಳೂರಿನ ಬಸವನಹಳ್ಳಿಯ ಕುಂಬಾರ ಬೀದಿ ಬಡಾವಣೆಯ ಗಣೇಶನ ಮೂರ್ತಿಗಳನ್ನು ತಯಾರಿಸುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಪೌರಾಯುಕ್ತ ಬಿ.ಸಿ. ಬಸವರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.