ಹೊಸದುರ್ಗ: 20ನೇ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 34ನೇ ಶ್ರದ್ಧಾಂಜಲಿ ಸಮಾರಂಭವನ್ನು ಸೆ.24ರಂದು ಸಾಣೇಹಳ್ಳಿಯಲ್ಲಿ ಅದ್ಧೂರಿಯಾಗಿ ಆಚರಿಸಲು ಸಮಾಜದ ಮುಖಂಡರ ತೀರ್ಮಾನಕ್ಕೆ ನಮ್ಮ ಸಮ್ಮತಿ ಇದೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯವರೆಗೆ ಕೇವಲ ಸಿರಿಗೆರೆಯಲ್ಲಿ ಮಾತ್ರ ಹಿರಿಯ ಗುರುಗಳ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗುತ್ತಿತ್ತು. ಆದರೆ ಈಗಿನ ಡಾ.ಗುರುಗಳು ಹಾಗೂ ಮುಖಂಡರ ನಡುವಿನ ವೈಮನಸ್ಸಿನ ನೋವನ್ನು ಮುಖಂಡರು ತೋಡಿಕೊಂಡಿದ್ದು, ಎಲ್ಲವೂ ಸರಿಯಾಗಲಿದೆ. ಯಾರು ಕೂಡ ತಾಳ್ಮೆಯನ್ನು ಕಳೆದುಕೊಳ್ಳಬಾರದು. ತಾಳಿದವನು ಬಾಳುತ್ತಾನೆ. ನಮ್ಮ ಗುರುಗಳು ಯಾವಾಗಲೂ ಸಂಯಮ, ತಾಳ್ಮೆ ಇದನ್ನು ಕಲಿಸಿಕೊಟ್ಟಂತವರು ಎಂದರು.
ನಮಗೂ ನೋವಾಗಿದೆ ಆದರೂ ಸಾಹಿತ್ಯ, ಧರ್ಮ ಶಿಕ್ಷಣ ಹೀಗೆ ನಮ್ಮಿಂದ ಏನೇನು ಒಳ್ಳೆ ಕಾರ್ಯಗಳನ್ನು ಮಾಡಲಿಕ್ಕೆ ಸಾಧ್ಯವೋ ಅಂತ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇವೆ. ಹಿರಿಯ ಗುರುಗಳ ಆದರ್ಶಗಳನ್ನು ಎಲ್ಲ ಜನರಿಗೂ ಅರ್ಥಪೂರ್ಣವಾಗಿ ಪರಿಚಯ ಮಾಡಿಕೊಡುವ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.ದಾವಣಗೆರೆಯ ಅಣಬೇರು ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಮ್ಮೆಲ್ಲರ ಬದುಕಿಗೆ ಬೆಳಕನ್ನು ನೀಡಿದಂತವರು. ದುಡಿಯುವ ಶಕ್ತಿಯನ್ನು ತಂದುಕೊಟ್ಟಂತವರು. ನಾನು ಮಾತನಾಡುವಂತಹ ಮಾತುಗಾರಿಕೆಯನ್ನು ಕಲಿಸಿದವರು. ಅಂಥವರ ಪುಣ್ಯಾರಾಧನೆಯನ್ನು ತುಂಬಾ ಚೆನ್ನಾಗಿ ಮಾಡೋಣ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕಳೆದ ನಾಲ್ಕಾರು ವರ್ಷಗಳಿಂದ ಶ್ರದ್ಧಾಂಜಲಿ ಸಮಾರಂಭ ಮಾಡುವಂತೆ ಬೇಡಿಕೆಯನ್ನು ಸಲ್ಲಿಸಿದ್ದು, ಈ ವರ್ಷ ಈಡೇರಿದೆ. ಅದಕ್ಕಾಗಿ ನನಗೆ ಬಹಳ ಸಂತೋಷ ಆಗಿದೆ. ಶಿವಕುಮಾರ ಶ್ರೀಗಳು ಮಠಗಳ ಏಕೀಕರಣವನ್ನು ಮಾಡಿದರು. ಶಿಕ್ಷಣ ಸಂಸ್ಥೆಗಳನ್ನು ತೆರೆದರು. ನಮ್ಮ ಸಮಾಜ ಜನ ತಲೆ ಎತ್ತಿ ಬಾಳುವಂತೆ ಮಾಡಿದರು. ಅಂಥವರ ಪುಣ್ಯತಿಥಿ ಮಾಡುವಂತದ್ದು ನಮ್ಮ ಬದುಕಿಗೆ ಒಂದು ರೀತಿ ಶಕ್ತಿ ಎಂದರು.ಸಭೆಯಲ್ಲಿ ನಿವೃತ್ತ ಕುಲಪತಿ ಸಿದ್ದಪ್ಪ, ಚಟ್ಟಳ್ಳಿ ಮಹೇಶ್, ವರ್ತಕ ಅರಕೆರೆ ಮಲ್ಲೇಶಣ್ಣ, ಶಿವಮೊಗ್ಗದ ಅಡಕೆ ವರ್ತಕ ಓಂಕಾರಪ್ಪ, ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ.ಎಸ್ ಮಾತನಾಡಿದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ ಹಾಗೂ ಶರಣ್ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಬಾಳೆಕಾಯಿ ಮೋಹನ್ ಸ್ವಾಗತಿಸಿದರೆ ಸಾ.ನಿ.ರವಿಕುಮಾರ್ ನಿರೂಪಿಸಿ, ವಂದಿಸಿದರು.ಸಭೆಯಲ್ಲಿ ಸುಮಾರು 450 ಜನ ಭಕ್ತರು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.