ಕೊಡವ ಜನಾಂಗ ಉಳಿವಿಗೆ ಜನಸಂಖ್ಯೆ ಹೆಚ್ಚಳ ಅಗತ್ಯ: ವಿಷ್ಣು ಕಾರ್ಯಪ್ಪ

KannadaprabhaNewsNetwork |  
Published : Dec 04, 2023, 01:30 AM IST
ಚಿತ್ರ : 3ಎಂಡಿಕೆ8 : ತರಾಷ್ಟ್ರೀಯ ರಗ್ಬಿ ಆಟಗಾರರಾದ ಮಾದಂಡ ಪಿ.ತಿಮಯ್ಯ, ಅಂತರಾಷ್ಟ್ರೀಯ ಹಾಕಿ ಆಟಗಾರ ಒಲಂಪಿಯನ್ ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಉದ್ಯೋನ್ಮುಖ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ಮತ್ತು ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೆಯರ್ಸ್ ಕಪ್-2023ರ ಸಮಾರೋಪ

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಇಡೀ ದೇಶದಲ್ಲೇ ವಿಶಿಷ್ಟ ಸಂಸ್ಕೃತಿ ಹೊಂದಿರುವ ಜನಾಂಗವೆಂದು ಕರೆಸಿಕೊಂಡಿರುವ ಕೊಡವರ ಅಸ್ತಿತ್ವದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಕೊಡವ ಜನಾಂಗದ ಅಸ್ತಿತ್ವ ಉಳಿಯಬೇಕಾದರೆ ಮೊದಲು ಕೊಡವರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಬೇಕು. ಇದಕ್ಕಾಗಿ ಮುಂದಿನ ತಲೆಮಾರಿನ ಕೊಡವ ಪೀಳಿಗೆ ವಿಶೇಷವಾದ ಗಮನಹರಿಸಬೇಕು ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕರೆ ನೀಡಿದ್ದಾರೆ.

ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೆಯರ್ಸ್ ಕಪ್-2023ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವರ ಹಲವು ಹೆಗ್ಗಳಿಕೆಗಳ ಪೈಕಿ ಹಾಕಿ ಕ್ರೀಡೆಯೂ ಒಂದು. ಕೆಲವು ವರ್ಷಗಳ ಹಿಂದೆ ಭಾರತದ ಹಾಕಿ ತಂಡದಲ್ಲಿ ಕೊಡವ ಆಟಗಾರರ ಪ್ರಾಬಲ್ಯವಿತ್ತು. ಇದೀಗ ಕೊಡಗಿನ ಯಾವೊಬ್ಬ ಆಟಗಾರರು ದೇಶದ ಹಾಕಿ ತಂಡದಲ್ಲಿ ಇಲ್ಲದಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ. ಇಂದು ಕೊಡವರು ಕೇವಲ ಆಸ್ತಿ ಮಾಡಿಡುವ ಕೆಲಸಕ್ಕೆ ಮಾತ್ರ ಆದ್ಯತೆ ನೀಡಬಾರದು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಆಸ್ತಿಯನ್ನು ಮಾರಾಟ ಮಾಡಿಯಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾದರೂ ರಾಜ್ಯದ ಬೇರೆಲ್ಲಾ ಜಿಲ್ಲೆಗಳಿಗಿಂತ ಹೆಚ್ಚು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ. ಆದರೆ ಇದೀಗ ಕೊಡಗಿನಿಂದ ನಿರೀಕ್ಷಿತ ಮಟ್ಟದ ಕ್ರೀಡಾಪಟುಗಳು ತಯಾರಾಗುತ್ತಿಲ್ಲ. ಕ್ರೀಡೆಯನ್ನು ಕೇವಲ ಬಹುಮಾನ ಪಡೆಯುವುದಕ್ಕೆ ಮಾತ್ರ ಸೀಮಿತಪಡಿಸಬಾರದು. ದೈಹಿಕ ಸದೃಢತೆಯೊಂದಿಗೆ ಭವಿಷ್ಯವನ್ನು ಕೂಡ ರೂಪಿಸಬಹುದಾದ ಕ್ರೀಡೆಯನ್ನು ನಿರ್ಲಕ್ಷತೆಯಿಂದ ನೋಡುವಂತಾಗಬಾರದು ಎಂದರು.

ಮುಂಬರುವ ಕೊಡವ ಕೌಟುಂಬಿಕ ಹಾಕಿ ಉತ್ಸವಗಳು ಬಾಳುಗೋಡಿನ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಆಯೋಜಿಸಲು ರೂಪುರೇಷೆ ಸಿದ್ದಗೊಳ್ಳಬೇಕಿದೆ. ಇದರಿಂದ ಆತಿಥ್ಯ ವಹಿಸುವ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕುಂಡಿಯೋಳಂಡ ಹಾಕಿ ಉತ್ಸವ-2024ರ ಆಯೋಜನಾ ಸಮಿತಿಯ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿದರು. ವಿ.ಬಾಡಗ ಹೈ ಫ್ಲೈಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ವಿ.ಬಾಡಗ ಹೈಫ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕುಂಬೇರ ಮನುಕುಮಾರ್, ನಾಡ್ ತಕ್ಕರಾದ ಮಳವಂಡ ಭುವೇಶ್, ಕಾಫಿ ಬೆಳೆಗಾರರಾದ ಚೇಮಿರ ಸದಾ ರಾಮಚ್ಚ, ಮಳವಂಡ ಬೋಜಮ್ಮ ಅಚ್ಚಪ್ಪ, ಚೇಮಿರ ಜಿ. ಪೂವಯ್ಯ, ಕೊಂಗಂಡ ಕಾಶಿ ಕಾರ್ಯಪ್ಪ, ವಿ ಬಾಡಗ ಹೈ ಫ್ಲೈಯರ್ಸ್ ಸಂಸ್ಥೆ ಉಪಾಧ್ಯಕ್ಷರಾದ ಚೇಮಿರ ನಂದಾ ಮತ್ತಿತರರಿದ್ದರು.ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ರಗ್ಬಿ ಆಟಗಾರರಾದ ಮಾದಂಡ ಪಿ.ತಿಮಯ್ಯ, ಅಂತರಾಷ್ಟ್ರೀಯ ಹಾಕಿ ಆಟಗಾರ ಒಲಂಪಿಯನ್ ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಉದ್ಯೋನ್ಮುಖ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ಮತ್ತು ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಅವರನ್ನು ಹೈಫ್ಲೈಯರ್ಸ್ ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಫೈನಲ್ ಪಂದ್ಯಕ್ಕೆ ಮುನ್ನ ಆಟಗಾರರನ್ನು ಮತ್ತು ಅತಿಥಿಗಳನ್ನು ಯರವರ ಸಾಂಪ್ರದಾಯಿಕ ಚೀನಿ ದುಡಿ ವಾದ್ಯದೊಂದಿಗೆ ಮೈದಾನಕ್ಕೆ ಕರೆದುಕೊಂಡು ಬರಲಾಯಿತು. ಬಳಿಕ ಅತಿಥಿಗಳು ಎರಡೂ ತಂಡದ ಆಟಗಾರರನ್ನು ಪರಿಚಯಿಸುವುದರ ಮೂಲಕ ಫೈನಲ್ಸ್ ಪಂದ್ಯಕ್ಕೆ ಚಾಲನೆ ನೀಡಿದರು.ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಅಮ್ಮಣಿಚಂಡ ರೋಹಿತ್ ಸ್ವಾಗತಿಸಿದರು. ಮಾಳೆಟೀರ ಶ್ರೀನಿವಾಸ್ ನಿರ್ವಹಿಸಿದರು. ತೀತಿಮಾಡ ಸೋಮಣ್ಣ ವಂದಿಸಿದರು.

ಕಾರ್ಯಕ್ರಮದಲ್ಲಿ ವಿ. ಬಾಡಗ ಜಿ.ಎಚ್‌.ಪಿ.ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಸಮೂಹ ನೃತ್ಯ, ಸ್ಥಳೀಯ ಪೊವ್ವದಿ ಮಹಿಳಾ ಸಂಘದ ವತಿಯಿಂದ ಕೊಡವ ಕೋಲಾಟ ಮತ್ತು ಶ್ರೀಮಂಗಲ ಕೊಡವ ಸಮಾಜ ತಂಡದಿಂದ ಕತ್ತಿಯಾಟ್ ಪ್ರದರ್ಶನ ಜರುಗಿತು. ಪಂದ್ಯಾವಳಿಯ ಫೈನಲ್ಸ್ ಅಂಗವಾಗಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿ.ಬಾಡಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ