ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗೋಳ್ತಮಜಲು ಹಾಗೂ ಬಾಳ್ತಿಲ ಗ್ರಾಮ ಪಂಚಾಯಿತಿ ಮತ್ತು ಬಾಳ್ತಿಲ ವಲಯದ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ 2026 ಕಾರ್ಯಕ್ರಮವು ಪೂರ್ಲಿಪ್ಪಾಡಿ ಕಲ್ಲಡ್ಕದ ಮರಾಠಿ ಭವನದಲ್ಲಿ ನಡೆಯಿತು.ಮಾಜಿ ಶಾಸಕ ರುಕ್ಮಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹೆಚ್.ಐ. ಅವರು ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಗರ್ಭಿಣಿಯರು ಹಾಗೂ ಬಾಣಂತಿಯರು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವಿಸುವುದರ ಅಗತ್ಯತೆ ಮತ್ತು ಆರೋಗ್ಯದ ಆರೈಕೆಯ ಕುರಿತು ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕಿ ಅಕ್ಷತಾ ಅವರು ಜಂಕ್ ಫುಡ್ ಸೇವನೆಯ ಬದಲು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರ ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದರು. ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಕೋಮಾಲಿ ಮಾತನಾಡಿ, ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದ್ದು, ಸಮಾಜದ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.