ಬಯಕೆ ಬುತ್ತಿಯೊಂದಿಗೆ ಎತ್ತಿನ ಬಂಡಿಯಲ್ಲಿ ಪೋಷಣ್ ಜಾಗೃತಿ ಮೆರವಣಿಗೆ

KannadaprabhaNewsNetwork |  
Published : Sep 27, 2026, 02:30 AM IST
ಪೋಟೊ26ಕೆಎಸಟಿ1ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದ ಪೋಷಣ್ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅಮರೇಶ್ ಹಾವಿನ್ ಮಾತನಾಡಿದರು.26ಕೆಎಸಟಿ1ಎಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದ ಪೋಷಣ್ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಎತ್ತಿನ ಬಂಡಿಯಲ್ಲಿ ಬಯಕೆ ಬುತ್ತಿಯನ್ನು ಮೆರವಣಿಗೆ ಮಾಡಲಾಯಿತು. | Kannada Prabha

ಸಾರಾಂಶ

ಪೌಷ್ಟಿಕ ಆಹಾರ, ತಾಯಿ–ಮಗುವಿನ ಆರೋಗ್ಯ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ನಡೆಯಿತು.

ಕುಷ್ಟಗಿ: ಎತ್ತಿನ ಬಂಡಿ, ಬಯಕೆ ಬುತ್ತಿ, ಡೊಳ್ಳಿನ ನಾದದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಪೋಷಣ್ ಮಾಸಾಚರಣೆಯ ಜಾಗೃತಿ ಮೆರವಣಿಗೆ ಗಮನ ಸೆಳೆಯಿತು.

ಪೌಷ್ಟಿಕ ಆಹಾರ, ತಾಯಿ–ಮಗುವಿನ ಆರೋಗ್ಯ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ನಡೆಯಿತು.

ತಾಲೂಕಿನ ಕಂದಕೂರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅಮರೇಶ್ ಹಾವಿನ್ ಹಾಗೂ ಪಿಡಿಒ ಗಿರಿಮಲ್ಲಪ್ಪ ಅವರನ್ನು ಎತ್ತಿನ ಬಂಡಿಯಲ್ಲಿ ಕೂರಿಸಿ, ಬಯಕೆ ಬುತ್ತಿಯೊಂದಿಗೆ ಮೆರವಣಿಗೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.

ಮಹಿಳೆಯರು ಕಳಶ ಹಿಡಿದು, ಡೊಳ್ಳಿನ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಪೋಷಣ್ ಮಾಸಾಚರಣೆಯ ಲೋಗೋ, ವಿವಿಧ ಬಗೆಯ ತರಕಾರಿ–ಸೊಪ್ಪು, ಪೌಷ್ಟಿಕ ಖಾದ್ಯಗಳು, ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ಸ್ಟಾಲ್‌ಗಳನ್ನು ತೆರೆಯಲಾಗಿತ್ತು.

ಗಣ್ಯರು ಸ್ಟಾಲ್‌ಗಳನ್ನು ವೀಕ್ಷಿಸಿ, ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳ ಬಳಕೆ, ಶಾಲಾ ಪೂರ್ವ ಶಿಕ್ಷಣ ಕುರಿತು ಮಾಹಿತಿ ಪಡೆದುಕೊಂಡರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅಮರೇಶ್ ಹಾವಿನ್, ಮಕ್ಕಳಿಗೆ ಬಾಲ್ಯದಿಂದಲೇ ಪೌಷ್ಟಿಕ ಹಾಗೂ ಸಮತೋಲನ ಆಹಾರ ನೀಡುವ ಮೂಲಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶ ಒದಗಿಸಬೇಕು ಎಂದು ಹೇಳಿದರು.

ಪೋಷಣ್ ಮಾಸಾಚರಣೆಯ ಉದ್ದೇಶ ಜನರಲ್ಲಿ ಪೌಷ್ಟಿಕ ಆಹಾರ, ಆರೋಗ್ಯಕರ ಜೀವನಶೈಲಿ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆ ಕುರಿತು ಜಾಗೃತಿ ಮೂಡಿಸುವುದಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಿ ತಾಯಿ-ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ಥಳೀಯವಾಗಿ ದೊರೆಯುವ ಸೊಪ್ಪು, ತರಕಾರಿ, ಬೇಳೆ ಹಾಗೂ ಧಾನ್ಯಗಳನ್ನು ಬಳಸಿ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ತಾಪಂ ಇಒ ಅಮರೇಶ್ ಯಾದವ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಕುಟುಂಬಗಳಲ್ಲಿ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸಬೇಕು ಎಂದರು.

ಸೂಪರವೈಸರ್ ಅನ್ನಪೂರ್ಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಣ್ ಮಾಸಾಚರಣೆಯ ಅಂಗವಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆ, ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಂದಕೂರು ಪಿಡಿಒ ಗಿರಿಮಲ್ಲಪ್ಪ ಮಾತನಾಡಿದರು. ಸಿಡಿಪಿಒ ಯಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು. ಅನ್ನಪ್ರಾಶಾನ, ಸೀಮಂತ ಕಾರ್ಯಕ್ರಮ ನಡೆಯಿತು.

ಗಣ್ಯರಾದ ಶರಣಪ್ಪ ಬಿಜಕಲ್, ಶಿವಶಂಕರಪ್ಪ ಚನ್ನಿ, ಭೀಮನಗೌಡ್ರ, ಶರಣಪ್ಪ ಗೋಪಾಳಿ, ಚಂದ್ರಹಾಸ ಬಾವಿಕಟ್ಟಿ, ರಾಮಣ್ಣ ತಳವಾರ, ಬಸವರಾಜ ಕಾಮನೂರ, ಆಂಜನೇಯ ಹಾದಿಮನಿ, ಬಸವರೆಡ್ಡೆಪ್ಪ ಹಾಲಕೇರಿ, ರಾಮಣ್ಣ ಉಪ್ಪಾರ, ಶರಣಯ್ಯ ಅಬ್ಬಿಗೇರಿ, ಮಂಜುನಾಥ ಸಂಕೀನ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!