ವೈದ್ಯಕೀಯ ಅಧೀಕ್ಷಕರ ಹುದ್ದೆ: ಅರ್ಹ ಅಭ್ಯರ್ಥಿಗೆ ಅನ್ಯಾಯ

KannadaprabhaNewsNetwork |  
Published : Nov 29, 2026, 01:30 AM IST
28ಕೆಡಿವಿಜಿ3-ದಾವಣಗೆರೆಯ ಹಿರಿಯ ವಕೀಲ ಎಂ.ಐ.ಖಾದರ್ ಬಾಷಾ. | Kannada Prabha

ಸಾರಾಂಶ

ದಾವಣಗೆರೆಯ ಇಎಸ್ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ನೇಮಕಾತಿ, ಪ್ರಭಾರ ಹುದ್ದೆ ನಿರ್ವಹಣೆ, ಅರ್ಹತೆ ಮತ್ತು ಸೇವಾ ಹಿರಿತನದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಿರಿಯ ವಕೀಲ ಎಂ.ಐ.ಖಾದರ್ ಬಾಷಾ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

- ದಾವಣಗೆರೆ ಇಎಸ್ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಹುದ್ದೆ ಬಗ್ಗೆ ತನಿಖೆ ನಡೆಯಲಿ: ವಕೀಲ ಖಾದರ್ ಬಾಷಾ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯ ಇಎಸ್ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ನೇಮಕಾತಿ, ಪ್ರಭಾರ ಹುದ್ದೆ ನಿರ್ವಹಣೆ, ಅರ್ಹತೆ ಮತ್ತು ಸೇವಾ ಹಿರಿತನದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಿರಿಯ ವಕೀಲ ಎಂ.ಐ.ಖಾದರ್ ಬಾಷಾ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಮೀಸಲಾತಿ ಹಕ್ಕುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮೀಸಲಾತಿ ನಿಯಮಗಳ ಉಲ್ಲಂಘನೆಗಳ ಕುರಿತಂತೆ ಉನ್ನತ ಮಟ್ಟದ ತನಿಖೆ ಕೈಗೊಂಡು, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯನ್ನು ಸರ್ಕಾರಿ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯಲ್ಲಿ ಸಮರ್ಪಕ ಅನುಷ್ಠಾನಗೊಳಿಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಂಬಂಧಿಸಿದ ಇಲಾಖೆಗೆ ಉನ್ನತ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಮೀಸಲಾತಿ ನಿಯಮಗಳನ್ನು ಪಾಲಿಸದೇ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಹಲವು ಅನುಮಾನ ಮತ್ತು ದೂರುಗಳು ಕೇಳಿಬರುತ್ತಿದ್ದರೂ ಸರ್ಕಾರ ಈ ವಿಚಾರದಲ್ಲಿ ಮೌನ ವಹಿಸಿರುವುದು ಕಳವಳಕಾರಿ ಸಂಗತಿ. ದಾವಣಗೆರೆ ಜಿಲ್ಲಾ ಇಎಸ್ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ಸಂಬಂಧಿಸಿದ ನೇಮಕಾತಿ, ಪ್ರಭಾರ ಹುದ್ದೆ ನಿರ್ವಹಣೆ, ಬಡ್ತಿ ಹಾಗೂ ಸೇವಾ ನಿಯಮಗಳ ಅನುಷ್ಟಾನದಲ್ಲಿ ಕಂಡುಬಂದ ಲೋಪದೋಷ ಮತ್ತು ಮೀಸಲಾತಿ ಹಕ್ಕುಗಳ ಉಲ್ಲಂಘನೆ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇಎಸ್ಐ ಆಸ್ಪತ್ರೆ ವೈದ್ಯಕೀಯ ಹುದ್ದೆಗೆ ಸಂಬಂಧಿಸಿದ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯಲ್ಲಿ ಅನ್ವಯವಾಗುವ ಮೀಸಲಾತಿ ರೋಸ್ಟರ್ ಪದ್ಧತಿ ಹಾಗೂ ಸಂವಿಧಾನಬದ್ಧ ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರಿತ ನೇಮಕಾತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಗುತ್ತಿಗೆ ನೇಮಕಾತಿಗಳಲ್ಲಿ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ, ತಾಂತ್ರಿಕ ಅರ್ಹತೆ, ಅನುಭವ ಮತ್ತು ಅನ್ವಯವಾಗುವ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ತಿಳಿಸಿದ್ದಾರೆ.

ಮೀಸಲಾತಿ ನಿಯಮ ಉಲ್ಲಂಘಿಸಿ ಅಥವಾ ಅರ್ಹತಾ ಮಾನದಂಡಗಳನ್ನು ಕಡೆಗಣಿಸಿ ನೇಮಕಾತಿ ಮಾಡಿರುವುದು ತನಿಖೆಯಲ್ಲಿ ಸಾಬೀತಾದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಮೀಸಲಾತಿ ಮತ್ತು ಬಡ್ತಿ ಪ್ರಕ್ರಿಯೆಗಳಲ್ಲಿ ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳ ಹಕ್ಕುಗಳನ್ನು ರಕ್ಷಿಸಿ, ಅಂತಹವರಿಗೆ ನ್ಯಾಯ ಒದಗಿಸಬೇಕು. ಸಲ್ಲಿಸಿರುವ ದೂರಿನ ಕುರಿತು ಕೈಗೊಂಡ ಕ್ರಮದ ಬಗ್ಗೆ ದೂರುದಾರರಿಗೆ ಲಿಖಿತ ಮಾಹಿತಿ ನೀಡಬೇಕು. ಸಾಮಾಜಿಕ ನ್ಯಾಯ ಯಾರೊಬ್ಬರ ದಯೆಯಲ್ಲ. ಅದು ಸಂವಿಧಾನ ನೀಡಿರುವ ಹಕ್ಕು ಎಂದು ಅವರು ಹೇಳಿದ್ದಾರೆ.

- - -

(ಬಾಕ್ಸ್‌)

* ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮವಾಗಲಿ

ಅಲ್ಲದೇ, ಮೀಸಲಾತಿ ವ್ಯವಸ್ಥೆ ದುರ್ಬಲಗೊಳಿಸುವ ಯಾವುದೇ ಕ್ರಮವು ಅರ್ಹ ಮತ್ತು ಹಿಂದುಳಿದ ಸಮುದಾಯಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರವು ಈ ವಿಚಾರ ಗಂಭೀರವಾಗಿ ಪರಿಗಣಿಸಿ, ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಕ್ಕೊಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರ ಮೌನ ವಹಿಸದೆ, ರಾಜ್ಯದ ಜನತೆಗೆ ಮತ್ತು ಮೀಸಲಾತಿ ವರ್ಗಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ, ಕಾನೂನು ಹೋರಾಟವೂ ಮುಂದುವರಿಯಲಿದೆ ಎಂದು ವಕೀಲ ಎಂ.ಐ.ಖಾದರ್ ಬಾಷಾ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

- - -

-28ಕೆಡಿವಿಜಿ3: ಎಂ.ಐ.ಖಾದರ್ ಬಾಷಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳೆಲ್ಲ ಒಗ್ಗೂಡಲಿ: ಶಂಕರ ಭಟ್ಟ
ಮಹಾಲಸಾ ಸಿದ್ಧಿವಿನಾಯಕ ದೇಗುಲದಲ್ಲಿ ಒಂದೇ ರಾತ್ರಿಯಲ್ಲಿ 25 ಸಾವಿರ ತೆಂಗಿನಕಾಯಿ ಒಡೆದ್ರು!