ಯೋಗದಿಂದ ಮನಸ್ಸಿಗೆ ಧನಾತ್ಮಕ ಪರಿಣಾಮ: ಮಾದಾರಾ ಚೆನ್ನಯ್ಯ ಸ್ವಾಮಿ

KannadaprabhaNewsNetwork |  
Published : Jun 20, 2024, 01:05 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ  | Kannada Prabha

ಸಾರಾಂಶ

ಯೋಗ ದಿನಾಚರಣೆ ಅಂಗವಾಗಿ ಬುಧವಾರ ಚಿತ್ರದುರ್ಗ ಪ್ರಮುಖ ಬೀದಿಯಲ್ಲಿ ಮುರುಘಾ ಮಠದ ವತಿಯಿಂದ ಯೋಗ ನಡಿಗೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು, ಮಠಾಧಿಪತಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಯೋಗ ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಬುಧವಾರ ನಡೆದ ಯೋಗ ನಡಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯದ ದೃಷ್ಟಿಯಿಂದ ಯೋಗ ಅಗತ್ಯವಾಗಿದ್ದು, ಇಂದಿನ ದಿನಮಾನಗಳಲ್ಲಿ ಒತ್ತಡದ ಬದುಕಿನಿಂದ ಬಿಡುಗಡೆ ಹೊಂದಲು ಯೋಗ ಅಗತ್ಯ. ಒಂದಷ್ಟು ಸಮಯ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಬದುಕಬೇಕಿದೆ. ದೇಹದಲ್ಲಿ ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದುವುದು ಜೀವನ ವಿಧಾನವಾಗಿದೆ. ಮನುಷ್ಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವಿ. ಜೀವನ ವಿಧಾನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಯೋಗ ಸಹಾಯಕವಾಗಿದ್ದು, ಇಂದಿನ ಯೋಗ ನಡಿಗೆಗೆ ಒಂದಷ್ಟು ಅರ್ಥ ಸಿಕ್ಕಿದೆ ಎಂದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಆರೋಗ್ಯಪೂರ್ಣ ಮನಸ್ಸಿದ್ದರೆ ಪ್ರಬುದ್ಧ ಸಮಾಜ ನಿರ್ಮಿಸಲು ಸಾಧ್ಯ. ಕಳೆದ ಹಲವು ವರ್ಷಗಳಿಂದ ಯೋಗದ ಬಗ್ಗೆ ವಿಶ್ವವ್ಯಾಪಿ ವ್ಯಾಪಕ ಚರ್ಚೆಯಾಗುತ್ತಿದೆ. ಇದು ಪ್ರಪಂಚದಾದ್ಯಂತ ಹರಡಿದೆ. ಯೋಗವೆಂದರೆ ದೇಹವನ್ನು ಬಗ್ಗಿಸುವುದು ಅಥವಾ ತಿರುಗಿಸುವುದು ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ. ನಮ್ಮ ವಾಸ್ತವವನ್ನು ನೋಡುವ ಮತ್ತು ಅನುಭವಿಸುವ ಸ್ಥಿತಿಗೆ ನಮ್ಮನ್ನು ತರಲು ಇದೊಂದು ವಿಧಾನವಾಗಿದೆ ಎಂದರು.

ನಮ್ಮ ಶಕ್ತಿಗಳ ಉತ್ಕೃಷ್ಟ ಭಾವ ಪರವಶವಾಗಲು ನಮ್ಮನ್ನು ನಾವು ಸಕ್ರಿಯಗೊಳಿಸಬೇಕು. ಆಗ ನಮ್ಮ ಸಂವೇದನಾಶೀಲವು ವಿಸ್ತಾರವಾಗುತ್ತದೆ. ಯೋಗವು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆತಂಕ, ಹೃದಯಸಂಬಂಧಿ ಕಾಯಿಲೆಗಳ ಆಪಾಯವನ್ನು ಕಡಿಮೆ ಮಾಡುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಪೂಜ್ಯರ ನೇತೃತ್ವದಲ್ಲಿ ಯೋಗ ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ನಡಿಗೆ ಮಾಡಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಇತರರಿಗೆ ಪ್ರೇರಣೆ ಆಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದು, ದೇಹ ಮತ್ತು ಮನಸ್ಸು ಒಂದಾಗುವ ಪ್ರಕ್ರಿಯೆಯೇ ಯೋಗ, ಅದಕ್ಕೆ ಇಂದಿನ ಯೋಗ ನಡಿಗೆಯೇ ಸಾಕ್ಷಿ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜಪೀರ್ ಮಾತನಾಡಿ, ಯೋಗ ಒಂದು ದಿನಕ್ಕೆ ಸೀಮಿತ ಆಗಬಾರದು. ನಿತ್ಯವೂ ಇಂತಹ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಲಿದೆ. ಚಟಗಳು ನಮ್ಮನ್ನು ಅನಾರೋಗ್ಯದ ಕಂದಕಕ್ಕೆ ತಳ್ಳುತ್ತವೆ. ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಇದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದು ಎಂದರು.

ಕೆಡಿಪಿ ಸದಸ್ಯ ಕೆ.ಸಿ ನಾಗರಾಜು ಮಾತನಾಡಿದರು. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪೂರ್ವಭಾವಿಯಾಗಿ ಆಯೋಜಿಸಿದ್ದ ಯೋಗ ನಡಿಗೆ (ಜಾಥಾ)ಯನ್ನು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ನಗಾರಿ ಬಾರಿಸುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಸವಪ್ರಭು ಸ್ವಾಮೀಜಿ, ಬಸವ ಮಾಚಿದೇವ ಸ್ವಾಮಿಗಳು, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಗುರುಮಠಕಲ್, ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಬಸವನಾಗಿದೇವ ಸ್ವಾಮಿಗಳು, ಶಿವಾನಂದ ಸ್ವಾಮಿಗಳು ಸಾಯಿಗಾಂವ, ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು ಬಳ್ಳೆಕಟ್ಟೆ, ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ತೆಲಸಂಗ, ತಿಪ್ಪೇರುದ್ರ ಸ್ವಾಮಿಗಳು, ಸಂಸದ ಗೋವಿಂದ ಎಂ.ಕಾರಜೋಳ, ನಗರಸಭೆ ಆಯುಕ್ತರಾದ ರೇಣುಕ, ಕೆಇಬಿ ಷಣ್ಮುಖಪ್ಪ, ಸುರೇಶ್‍ಬಾಬು, ಸಿದ್ದವ್ವನಹಳ್ಳಿ ಪರಮೇಶ್, ಡಿ.ಎಸ್. ಮಲ್ಲಿಕಾರ್ಜುನ್, ಪಿ.ವೀರೇಂದ್ರಕುಮಾರ್, ವಿವಿಧ ಸಮಾಜದ ಸಂಘ ಸಂಸ್ಥೆಗಳ ಮುಖಂಡರು, ಶ್ರೀಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ನೌಕರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾಥಾವು ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಬೆಳಗ್ಗೆ 7.30ಕ್ಕೆ ಆರಂಭಗೊಂಡು ಒನಕೆ ಓಬವ್ವ ವೃತ್ತದಲ್ಲಿ ಸಮಾಪ್ತಿಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು
ಹಸಿರು ಮಾರ್ಗಕ್ಕೆ ಬರಲಿವೆ 21 ಹೊಸ ರೈಲುಗಳು