ಬಸ್ ಸಮಸ್ಯೆ ಬಗೆಹರಿಸುವಂತೆ ಎಸ್‌ಎಫ್‌ಐ ಒತ್ತಾಯ

KannadaprabhaNewsNetwork |  
Published : Jun 20, 2024, 01:05 AM IST
೧೮ಎಚ್‌ವಿಆರ್೩- | Kannada Prabha

ಸಾರಾಂಶ

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಈಗಿರುವ ಬಸ್ಸಿನ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಬಸ್ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಶಾಲಾ-ಕಾಲೇಜು, ಹಾಸ್ಟೆಲ್‌ಗಳಿಗೆ ಸಮರ್ಪಕವಾಗಿ ಬಸ್ ಸೇವೆ ಒದಗಿಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಗರ ಸಾರಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ದಿನನಿತ್ಯ ವ್ಯಾಪಾರ ವಹಿವಾಟಗಾಗಿ, ವಿದ್ಯಾಭ್ಯಾಸಕ್ಕಾಗಿ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಸರ್ಕಾರಿ ನೌಕರರು, ವ್ಯಾಪಾರಸ್ಥರು ಅನೇಕರು ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲಕರವಾಗಿದ್ದು, ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲದೆ ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು, ಹಾಸ್ಟೆಲ್‌ಗಳಿಗೆ ತೆರಳಲು ಬಸ್ ಸಮಸ್ಯೆಗಳು ವಿಪರೀತವಾಗಿದ್ದು ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಈಗಿರುವ ಬಸ್ಸಿನ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡುವುದರ ಜೊತೆಗೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್‌ಗಳನ್ನು ಬಿಡಬೇಕು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಹಾವೇರಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಸಮಸ್ಯೆಗಳ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಮುಖಂಡ ಸುಲೇಮಾನ ಮತ್ತಿಹಳ್ಳಿ ಮಾತನಾಡಿ, ಡಿಪೋ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ.೨ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಹತ್ತಿಸಿಕೊಂಡು ಹೋಗುವುದಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಕೇಂದ್ರದಿಂದ ಹಾಸ್ಟೆಲ್, ಶಾಲಾ-ಕಾಲೇಜುಗಳು ನಗರದ ಹೊರವಲಯದಲ್ಲಿ ಇರುವುದರಿಂದ ದಿನನಿತ್ಯವು ಐದಾರು ಕಿಲೋ ಮೀಟರ್ ನಡೆದು ಹೋಗಬೇಕಿದೆ. ಪ್ರತಿ ವರ್ಷ ಎಸ್‌ಎಫ್‌ಐ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಮಾತ್ರ ಬಸ್ ವ್ಯವಸ್ಥೆ ಸರಿಯಾಗಿ ಬಿಡುತ್ತಾರೆ ಅನಂತರ ಮತ್ತೆ ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದರು.

ಮನವಿ ಪತ್ರ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಕೆಂಪಣ್ಣ ಅಂಬಣ್ಣಗಿ ಮಾತನಾಡಿ, ಸಂಬಂಧಿಸಿದ ಕಂಡಕ್ಟರ್, ಡ್ರೆöÊವರ್‌ಗಳಿಗೆ ಮತ್ತೊಮ್ಮೆ ಕಡ್ಡಾಯವಾಗಿ ಬಸ್ ನಿಲ್ಲಿಸಲು ಆದೇಶ ಹೊರಡಿಸುತ್ತೇವೆ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜು ಬಂಗಾಳಿ, ನಿರಂಜನ ಹಾದಿಮನಿ, ಧನುಷ್ ದೊಡ್ಡಮನಿ, ಅಜಯ್ ಲಮಾಣಿ, ಕಾರ್ತಿಕ ತಳವಾರ, ನೀಲಪ್ಪ ತಳವಾರ, ಸುನೀಲ್ ಲಮಾಣಿ, ಮನು ಕಾರಭಾರಿ, ಮುತ್ತುರಾಜ ಹರಿಜನ, ಕುಬೇರ ಗೋಣಿ, ಅಭಿಷೇಕ್, ಆಕಾಶ ಆರ್, ಚಂದ್ರಶೇಖರ ಕೆ.ಎಲ್, ಪ್ರಕಾಶ್ ಎಲ್, ಪ್ರಜ್ವಲ್ ಕೆ. ಎಚ್, ಪರಶುರಾಮ್ ಎಚ್.ಎಂ., ವಿನಾಯಕ ಹರಿಜನ ಇನ್ನಿತರ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ