ಅಂಚೆ ನಂಬಿಕೆ, ಪ್ರಾಮಾಣಿಕತೆಯ ತಳಹದಿ

KannadaprabhaNewsNetwork | Published : Mar 10, 2025 12:20 AM

ಸಾರಾಂಶ

ಸಾಗರ: ಈ ದೇಶದಲ್ಲಿ ಅಂಚೆ ನಂಬಿಕೆ ಮತ್ತು ಪ್ರಾಮಾಣಿಕತೆ ತಳಹದಿಯಾಗಿ ಉಳಿದುಕೊಂಡು ಬಂದಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಸಾಗರ: ಈ ದೇಶದಲ್ಲಿ ಅಂಚೆ ನಂಬಿಕೆ ಮತ್ತು ಪ್ರಾಮಾಣಿಕತೆ ತಳಹದಿಯಾಗಿ ಉಳಿದುಕೊಂಡು ಬಂದಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ತಾಲೂಕಿನ ಭೀಮನಕೋಣೆ ಶ್ರೀಲಕ್ಷ್ಮಿ ನಾರಾಯಣ ಸಭಾಂಗಣದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಭಾನುವಾರ ಹಮ್ಮಿಕೊಂಡಿದ್ದ ೩ನೇ ದ್ವೈವಾರ್ಷಿಕ ಶಿವಮೊಗ್ಗ ವಿಭಾಗೀಯ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬೇರೆಲ್ಲ ಇಲಾಖೆಗಳಲ್ಲಿ ಅನೇಕ ರೀತಿಯ ಸ್ಥಿತ್ಯಂತರಗಳು ಘಟಿಸಿದರೂ ಅಂಚೆ ಇಲಾಖೆಯಲ್ಲಿ ಮಾತ್ರ ಮೂಲ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು.ಪ್ರಸ್ತುತ ಅಂಚೆ ಇಲಾಖೆಯಿಂದ ಜನರಿಗೆ ಲಭ್ಯವಾಗುವ ಅನೇಕ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಸರ್ಕಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳು ಕೂಡ ಅಂಚೆ ಇಲಾಖೆಯ ಮೂಲಕ ತಲುಪುತ್ತಿದೆ. ಆದರೆ ಈ ನಡುವೆ ವಿಪರ್ಯಾಸದ ಸಂಗತಿ ಎಂದರೆ ಇಂದಿಗೂ ಗ್ರಾಮೀಣ ಅಂಚೆ ಸೇವಕರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ಮಾಡಿಲ್ಲ ಎಂದರು.ಗ್ರಾಮೀಣ ಅಂಚೆ ಸೇವಕರಿಗೆ ಕಡ್ಡಾಯ ಕೆಲಸವಾದರೂ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿದೆ. ಜೊತೆಗೆ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಅಧಿವೇಶನಗಳು ಸಂಘಟನೆಗೆ ಬಲ ನೀಡಿ ಸರ್ಕಾರದ ಗಮನ ಸೆಳೆಯುವುದಕ್ಕೆ ಸಹಕಾರಿಯಾಗಬಹುದು ಎಂದು ಹೇಳಿದರು.ಸಂಘದ ಕರ್ನಾಟಕ ವಲಯ ಕಾನೂನು ಸಲಹೆಗಾರ ಎಸ್.ಎಸ್.ಮಂಜುನಾಥ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮಲ್ಲಿ ಶಿಸ್ತು ಬದ್ಧತೆ, ಪ್ರಾಮಾಣಿಕತೆ ಎಂದೂ ಬದಲಾಗಬಾರದು. ಜೊತೆಗೆ ಸಂಘಟನೆಗೂ ಆದ್ಯತೆ ನೀಡಬೇಕಿದೆ ಎಂದರು. ವಿಭಾಗೀಯ ಅಧ್ಯಕ್ಷ ಎಚ್.ಜಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನವದೆಹಲಿ ಜನರಲ್ ಸೆಕ್ರೆಟರಿ ಎಸ್.ಎಸ್.ಮಹಾದೇವಯ್ಯ, ಸಾಗರ ಅಂಚೆ ನಿರೀಕ್ಷಕ ಧನಂಜಯ ಗೌಡ, ವಿಭಾಗೀಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ರಾವ್, ಭೀಮನಕೋಣೆ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಮತ್ತಿತರರು ಇದ್ದರು.

ಮಾಜಿ ವಲಯಾಧ್ಯಕ್ಷ ಪ್ರಹ್ಲಾದ್ ರಾವ್ ಅವರನ್ನು ಗೌರವಿಸಲಾಯಿತು.

Share this article