ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ಸಾರ್ವಜನಿಕರಿಗೆ ಸಮರ್ಪಕ ಅಂಚೆ ಸೇವೆ ಹಾಗೂ ಬ್ಯಾಂಕಿಂಗ್ ಸೇವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಅಂಚೆ ಕಚೇರಿಗಳು ಸ್ವಂತ ಕಟ್ಟಡವಿಲ್ಲದೇ ಇನ್ನೂ ಬಾಡಿಗೆಯ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ.ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಪ ಅಂಚೆ ಕಚೇರಿಗಳು ಹಾಗೂ ಶಾಖಾ ಅಂಚೆ ಕಚೇರಿಗಳು ಸ್ವಂತ ಕಟ್ಟಡ ಭಾಗ್ಯವಿಲ್ಲದೇ ಬಾಡಿಗೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂಚೆ ಕಚೇರಿಗೆ ಬರುವ ಸಾರ್ವಜನಿಕರು ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆ ಎದುರಿಸುವಂತಾಗಿದೆ.
ಮಾಸಿಕ ಬಾಡಿಗೆ ನೀಡಿಯೂ ಅತ್ಯಂತ ಇಕ್ಕಟ್ಟಾದ ಸ್ಥಳಗಳಲ್ಲಿ ಅಂಚೆ ಕಚೇರಿ ನಡೆಯುತ್ತಿದೆ. ಇದರಿಂದ ಗ್ರಾಹಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ನಿಂತು ಅರ್ಜಿಗಳನ್ನು ತುಂಬಲು ಸಮರ್ಪಕ ಸ್ಥಳವಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗೆ ಸೂಕ್ತ ಸ್ಥಳಾವಕಾಶ ಇಲ್ಲದಂತಾಗಿದೆ.ಅಂಚೆ ಕಚೇರಿಯಲ್ಲಿ ತೆರೆಯಲಾದ ಉಳಿತಾಯ ಖಾತೆಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಎಲ್ಲ ತರಹದ ಪಿಂಚಣಿಯ ಹಣವು ಸಹಿತ ಈ ಅಂಚೆ ಕಚೇರಿಯಲ್ಲಿ ಹೊಂದಿರುವ ಉಳಿತಾಯ ಖಾತೆಗೆ ಹೆಚ್ಚಾಗಿ ಜಮೆಯಾಗುತ್ತಿವೆ.
9 ಉಪ ಅಂಚೆ ಕಚೇರಿ:ಕುಷ್ಟಗಿ ಪೋಸ್ಟ್ ಆಫೀಸ್ ವ್ಯಾಪ್ತಿಗೆ 9 ಉಪ ಅಂಚೆ ಕಚೇರಿಗಳಿವೆ. ಬೇವೂರು, ಚಳಗೇರಾ, ಹನುಮನಾಳ, ಹನುಮಸಾಗರ, ದೋಟಿಹಾಳ, ಇರಕಲ್ಗಡ, ಕುಷ್ಟಗಿ, ಕುಷ್ಟಗಿ ಪಟ್ಟಣದ ಇಲಾಖೆಯ ಕಟ್ಟಡ, ತಾವರಗೇರಾ ಶಾಖೆಗಳು ಬಾಡಿಗೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.ಬಾಡಿಗೆ ಹೊರೆ:
ಬ್ರ್ಯಾಂಚ್ ಆಫೀಸ್ ಸಿಬ್ಬಂದಿಗೆ ಮೆಂಟೆನೆನ್ಸ್ ಚಾರ್ಜ್ ಗೆ ಇಲಾಖೆ ಕಡಿಮೆ ಹಣ ಕೊಡುತ್ತಿದೆ. ಇಲಾಖೆ ಕೊಡುವ ಹಣದಲ್ಲಿ ಬಾಡಿಗೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಆಗುವುದಿಲ್ಲ. ಇದರಿಂದ ಕೆಲಸ ಮಾಡುವ ಸಿಬ್ಬಂದಿಗೆ ಹೊರೆಯಾಗುತ್ತದೆ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.ಗ್ರಾಮೀಣ ಭಾಗದ ಅಂಚೆ ಕಚೇರಿಗಳಿಗೆ ಗ್ರಾಪಂ ಕಟ್ಟಡ ಒದಗಿಸಿಕೊಡಬೇಕು ಎಂಬ ನಿಯಮವಿದೆ. ಗ್ರಾಪಂ ಆಡಳಿತವು ಅಂಚೆ ಕಚೇರಿಗಾಗಿ ಸೂಕ್ತ ಕಟ್ಟಡ ಒದಗಿಸಿಕೊಟ್ಟರೆ ಸಾರ್ವಜನಿಕರ ಸೌಲಭ್ಯಗಳಿಗೆ ಅನುಕೂಲವಾಗಬಹುದು.
ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಿಗೆ ಗ್ರಾಪಂ ಕಟ್ಟಡ ಒದಗಿಸಿಕೊಡಬೇಕು. ಕಟ್ಟಡಗಳು ಲಭ್ಯವಿಲ್ಲದೇ ಹೋದರೆ ನಾವು ಬಾಡಿಗೆ ಕಟ್ಟಡದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ದೋಟಿಹಾಳ ಅಂಚೆ ಕಚೇರಿ ಬಹಳ ಇಕ್ಕಟ್ಟಾದ ಸ್ಥಳದಲ್ಲಿರುವುದು ನನ್ನ ಗಮನಕ್ಕೆ ಬಂದಿದೆ. ಮುಖ್ಯ ರಸ್ತೆಗೆ ತರುವಂತಹ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಕುಷ್ಟಗಿ ಉಪ ವಿಭಾಗ ಅಂಚೆ ಕಚೇರಿ ನಿರೀಕ್ಷಕ ಮಹಾಂತೇಶ ತೊಗರಿ.