ಹುಬ್ಬಳ್ಳಿ: ಅಯೋಧ್ಯೆಯಲ್ಲಿ ದಶಕಗಳ ನಂತರ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಾಕಾರಕ್ಕೆ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ "ಅಭಿನಂದನ ಮೋದಿಜಿ " ಪೋಸ್ಟ್ ಕಾರ್ಡ್ ಅಭಿಯಾನದ ಹಿನ್ನೆಲೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಶನಿವಾರ ಸ್ವತಃ ಪೋಸ್ಟ್ ಕಾರ್ಡ್‌ನಲ್ಲಿ ಬರೆದು ಪೋಸ್ಟ್ ಕಳಿಸುವ ಮೂಲಕ ಚಾಲನೆ ನೀಡಿದರು.
ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 41ರಲ್ಲಿ ಹಮ್ಮಿಕೊಂಡಿದ್ದ ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಅಯೋಧ್ಯೆಯಲ್ಲಿ ದಶಕಗಳ ನಂತರ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಾಕಾರಗೊಂಡ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಹಿಂದುಗಳು ಸಂಭ್ರಮಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ನುಡಿದಂತೆ ನಡೆದ ಪ್ರಧಾನಿ ಮೋದಿಯ ಶ್ರೀರಾಮ ಮಂದಿರ ಟ್ರಸ್ಟ್ ವತಿಯಿಂದ ಭವ್ಯವಾದ ಮಂದಿರ ನಿರ್ಮಾಣಗೊಂಡಿದ್ದು, ಪ್ರತಿನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಅಯೋಧ್ಯೆಯು ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಸಿದ್ದು ಮೊಗಲಿಶೆಟ್ಟರ, ರಂಗಾ ಬದ್ದಿ, ವಸಂತ ನಾಡಜೋಶಿ, ಆನಂದ ಪಾಟೀಲ, ರಘು ಧಾರವಾಡಕರ, ಡಿ.ಬಿ. ಪಾಟೀಲ, ವ್ಯಾಸರಾಯ ಕುಲಕರ್ಣಿ, ಇಂದ್ರಾಣಿ ಚವ್ಹಾಣ, ಸಂಧ್ಯಾ ದೀಕ್ಷಿತ, ಸ್ವಪ್ನಾ ಶಿಂಧೆ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.