ಅಂಚೆ ಮೂಲಕ ಮನೆ ಬಾಗಿಲಿಗೆ ಮಾವು

KannadaprabhaNewsNetwork |  
Published : Apr 23, 2025, 02:03 AM IST
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌(ಕರ್ನಾಟಕ ವೃತ್ತ) ಎಸ್‌.ರಾಜೇಂದ್ರಕುಮಾರ್‌ ಅವರು, ಅಂಚೆ ಮೂಲಕ ಮಾವು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾವು ಹಂಗಾಮು ಶುರುವಾದ ಬೆನ್ನಲ್ಲೇ ಮನೆ ಬಾಗಿಲಿಗೆ ಅಂಚೆ ಮೂಲಕ ಮಾವು ಸರಬರಾಜಿಗೆ ಅಂಚೆ ಇಲಾಖೆ ಸಿದ್ಧವಾಗಿದ್ದು ಬುಕ್ಕಿಂಗ್‌ ಕೂಡ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾವು ಹಂಗಾಮು ಶುರುವಾದ ಬೆನ್ನಲ್ಲೇ ಮನೆ ಬಾಗಿಲಿಗೆ ಅಂಚೆ ಮೂಲಕ ಮಾವು ಸರಬರಾಜಿಗೆ ಅಂಚೆ ಇಲಾಖೆ ಸಿದ್ಧವಾಗಿದ್ದು ಬುಕ್ಕಿಂಗ್‌ ಕೂಡ ಆರಂಭವಾಗಿದೆ.

ಮಂಗಳವಾರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌(ಕರ್ನಾಟಕ ವೃತ್ತ) ಎಸ್‌.ರಾಜೇಂದ್ರಕುಮಾರ್‌ ಅವರು, ಅಂಚೆ ಮೂಲಕ ಮಾವು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಿದರು.

ಆನ್‌ಲೈನ್‌ನಲ್ಲಿ ಮಾವು ಮಾರಾಟ ಮಾಡುವ ಸಂಬಂಧ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನಿಮಗಮದ ವೆಬ್‌ಪೋರ್ಟಲ್‌ ‘ಕರ್‌ಸಿರಿ’ ( https://www.karsirimangoes.karnataka.gov.in/ ) ಮೂಲಕ ಹಣ್ಣು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾವು ಬುಕ್‌ ಮಾಡಿದ 2 ಅಥವಾ 3 ದಿನಗಳಲ್ಲಿ ಅಂಚೆ ಮೂಲಕ ಮನೆ ಬಾಗಿಲಿಗೆ ಮಾವಿನ ಹಣ್ಣು ಸರಬರಾಜಾಗಲಿದೆ. ಪ್ರಸ್ತುತ ಬೆಂಗಳೂರಿನ ನಾಗರಿಕರಿಗೆ ಮಾತ್ರ ಈ ಸೌಲಭ್ಯವಿದ್ದು, ರೈತರಿಂದ ನೇರವಾಗಿ ತಾಜಾ ಮಾವಿನ ಹಣ್ಣುಗಳನ್ನು ಅಂಚೆ ಇಲಾಖೆ ಮೂಲಕ ತಲುಪಿಸುವ ಕಾರ್ಯ ನಡೆಯುತ್ತಿದೆ. ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ನೋಂದಾಯಿತ ರೈತರು ಮಾರುತ್ತಿರುವ ಹಣ್ಣು ಹಾಗೂ ದರದ ಮಾಹಿತಿ ಸಿಗುತ್ತದೆ. ಗ್ರಾಹಕರು ತಮಗೆ ಅಗತ್ಯವಿರುವ ಹಣ್ಣನ್ನು ಕ್ಲಿಕ್‌ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲೇ (ಅಂಚೆ ಶುಲ್ಕವೂ ಸೇರಿ) ಹಣ ಪಾವತಿಸಬೇಕು. ಬುಕ್‌ ಆದ ಕೂಡಲೇ ಇ-ಮೇಲ್‌ ಮತ್ತು ಮೊಬೈಲ್‌ಗೆ ಸಂದೇಶ ಬರಲಿದೆ. ಅಂಚೆ ಇಲಾಖೆ ಹಾಗೂ ರೈತರಿಗೆ ಬುಕ್ಕಿಂಗ್‌ ಮಾಹಿತಿ ರವಾನೆಯಾಗುತ್ತದೆ.

ರೈತರು ಗ್ರಾಹಕರು ಬುಕ್ಕಿಂಗ್‌ ಮಾಡಿದ ಹಣ್ಣನ್ನು ಅಂಚೆ ಕಚೇರಿಗೆ ತಲುಪಿಸಿದ ನಂತರ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ಅಂಚೆ ಮೂಲಕ ತಲುಪಲಿದೆ. ಒಂದು ವೇಳೆ ಹಣ್ಣಿನಲ್ಲಿ ಯಾವುದೇ ಲೋಪವಿದ್ದಲ್ಲಿ ನೇರವಾಗಿ ರೈತರಿಗೆ ವಿಷಯ ತಿಳಿಸಬಹುದಾಗಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್‌ ತಿಳಿಸಿದರು.

ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌(ಕರ್ನಾಟಕ ವೃತ್ತ) ಎಸ್‌.ರಾಜೇಂದ್ರಕುಮಾರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೋಸ್ಟಲ್‌ ಸರ್ವೀಸ್‌ ನಿರ್ದೇಶಕ ಸಂದೇಶ ಮಹದೇವಪ್ಪ, ಪೋಸ್ಟಲ್‌ ಸರ್ವೀಸ್‌ ನಿರ್ದೇಶಕಿ (ಬೆಂಗಳೂರು ಕೇಂದ್ರ ಕಚೇರಿ) ವಿ.ತಾರಾ, ಚೀಫ್‌ ಪೋಸ್ಟ್‌ ಮಾಸ್ಟರ್‌ ಎಚ್‌.ಎಂ.ಮಂಜೇಶ್‌ ಉಪಸ್ಥಿತರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ