ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ಪೋಸ್ಟರ್‌ ಅಭಿಯಾನ

KannadaprabhaNewsNetwork |  
Published : Jun 26, 2024, 12:34 AM IST
ಹರಪನಹಳ್ಳಿ ಪಟ್ಟಣದಲ್ಲಿ ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ಪಕ್ಷದ ವಿರುದ್ದ ಬಿಜೆಪಿ ಕಾರ್ಯಕರ್ತರು ಪೋಸ್ಟರ್‌ ಅಭಿಯಾನ ನಡೆಸಿದರು. | Kannada Prabha

ಸಾರಾಂಶ

ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಂವಿಧಾನಕ್ಕೆ ಅತಿಹೆಚ್ಚು ತಿದ್ದುಪಡಿ ತಂದು ಮೂಲ ಸಂವಿಧಾನದ ಆಶಯಕ್ಕೆ ಎಳ್ಳುನೀರು ಬಿಟ್ಟಿದ್ದು ಇದೇ ಕಾಂಗ್ರೆಸ್‌ ಪಕ್ಷ.

ಹರಪನಹಳ್ಳಿ: ಇಲ್ಲಿಯ ಬಿಜೆಪಿ ಮಂಡಲದಿಂದ ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ಮಂಗಳವಾರ ಪೋಸ್ಟರ್‌ ಅಭಿಯಾನ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕಡೇಮನಿ ಸಂಗಮೇಶ್ ಮಾತನಾಡಿ, ಬಾಬಾಸಾಹೇಬ್‌ ಅಂಬೇಡ್ಕರ್‌ ಕೊಟ್ಟ ಸಂವಿಧಾನವನ್ನೇ ಧೂಳಿಪಟ ಮಾಡಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇದೆ ಎಂದು ಪ್ರಶ್ನಿಸಿದರು.

ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಂವಿಧಾನಕ್ಕೆ ಅತಿಹೆಚ್ಚು ತಿದ್ದುಪಡಿ ತಂದು ಮೂಲ ಸಂವಿಧಾನದ ಆಶಯಕ್ಕೆ ಎಳ್ಳುನೀರು ಬಿಟ್ಟಿದ್ದು ಇದೇ ಕಾಂಗ್ರೆಸ್‌ ಪಕ್ಷ. ಇವತ್ತು ಕಿಂಚಿತ್ತಾದರೂ ಪಾಪಪ್ರಜ್ಞೆ ಕಾಡುತ್ತಿದ್ದರೆ ರಾಹುಲ್‌ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರು ಕ್ಷಮೆ ಕೇಳಲಿ ಎಂದು ಅವರು ಹೇಳಿದರು.

42ನೇ ತಿದ್ದುಪಡಿ ಮಾಡುವ ಮೂಲಕ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಸಾಂವಿಧಾನಿಕ ತಿದ್ದುಪಡಿ ಎಂಬ ಕುಖ್ಯಾತಿಯನ್ನು ಕಾಂಗ್ರೆಸ್‌ ಪಕ್ಷ ಹೊಂದಿದೆ. ಈ ಕಾರಣಕ್ಕಾದರೂ ಕಾಂಗ್ರೆಸ್‌ ದೇಶದ ಜನರ ಮುಂದೆ ಮಂಡಿಯೂರಿ ಕ್ಷಮೆ ಕೇಳಬೇಕಿದೆ ಎಂದು ನುಡಿದರು.ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಅಧಿಕಾರವನ್ನೇ ಕಡಿತಗೊಳಿಸುವ ತಿದ್ದುಪಡಿ ತಂದಿದ್ದು ಭಾರತದ ಪಾಲಿಗೆ ಕರಾಳ ಸಂಗತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದಕ್ಕೂ ಅವಕಾಶ ಕೊಡದೇ ಸರ್ವಾಧಿಕಾರ ರಾಜ್ಯ ಸರ್ಕಾರ ಪೊಲೀಸರ ಮೂಲಕ ಬಂಧಿಸುತ್ತಿದೆ ಎಂದರೆ ಸಂವಿಧಾನವನ್ನು ಮತ್ತೊಮ್ಮೆ ಗಾಳಿಗೆ ತೂರುತ್ತಿದೆ ಎಂದೇ ಅರ್ಥ ಎಂದರು.

ಕಾಂಗ್ರೆಸ್ಸಿನ ಯುವರಾಜ ರಾಹುಲ್‌ ಗಾಂಧಿ ಅಜ್ಜಿ ಮಾಡಿದ ತಪ್ಪಿಗೆ ದೇಶದ ನಾಗರಿಕರ ಮುಂದೆ ಕ್ಷಮೆ ಕೇಳಲಿ ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ್ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರವಿ ನಾಯ್ಕ, ಯುವ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಾನಂದ, ಪಕ್ಷದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಮಹೇಶ್, ವಿಜಯಕುಮಾರ್, ಅಕ್ಷಯ್, ಶರತ್, ಗಂಗಾಧರ್, ಮಾರುತಿ ಹಳ್ಳಿಕೆರೆ ಇತರರು ಉಪಸ್ಥಿತರಿದ್ದರು.

PREV

Recommended Stories

2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
ದಸರಾಗೆ ಬಾನು : ಸುಪ್ರೀಂನಲ್ಲಿ ಮೇಲ್ಮನವಿ ವಜಾ