ಲಕ್ಷ ಸಸಿ ನೆಡುವ ಆಂದೋಲನಕ್ಕೆ ಚಾಲನೆ

KannadaprabhaNewsNetwork | Published : Jun 26, 2024 12:34 AM

ಸಾರಾಂಶ

ಜಿಲ್ಲೆಯಾದ್ಯಂತ ಹಮ್ಮಿಕೊಂಡ ಲಕ್ಷ ಸಸಿ ನೆಡುವ ಕಾರ್ಯಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯನ್ನು ಹಚ್ಚ ಹಸಿರಾಗಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಲಕ್ಷ ಸಸಿ ನೆಡುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಂಗಳವಾರ ಚಾಲನೆ ನೀಡಿದರು.

ಜಿಲ್ಲಾಡಳಿತ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಸಾರ್ವಜನಿಕರು, ವಿದ್ಯಾರ್ಥಿಗಳ ಸಮನ್ವಯದೊಂದಿಗೆ ರೂಪಿಸಲಾದ ಲಕ್ಷ ಸಸಿ ನೆಡುವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಿಡ ನೆಟ್ಟರೆ ಸಾಲದು, ಅವುಗಳ ಸಂರಕ್ಷಣೆ ಮುಖ್ಯವಾಗಿದೆ. ಕಾಂಪೌಂಡ್ ಇರುವ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಶ್ರೀಗಂಧ, ತೇಗು ಮತ್ತಿ ಹಾಗೂ ಸಾಗವಾನಿಗಳಂತಹ ಉಪಯುಕ್ತ ಬೆಲೆಬಾಳುವ ಮರಗಳನ್ನು ನೆಡುವ ಕಾರ್ಯವಾಗಬೇಕು ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ ಕಳೆದ ಬೇಸಿಗೆಯಲ್ಲಿ ಶೇ.42ರಷ್ಟು ತಾಪಮಾನ ಅನುಭವಿಸಿದ್ದೇವೆ. ಇಂತಹ ತಾಪಮಾನ ಮುಂದಿನ ದಿನಗಳಲ್ಲಿ ಬರದಂತೆ ಮಾಡಬೇಕಾದರೆ, ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು. ಹೆಚ್ಚು ಎತ್ತರ ಹಾಗೂ ವಿಶಾಲವಾಗಿ ಬೆಳೆದ ಮರಗಳು ಮೋಡಗಳನ್ನು ಆಕರ್ಷಿಸುವ ಗುಣ ಹೊಂದಿರುವುದರಿಂದ ಅಂತಹ ಗಿಡಗಳನ್ನು ನೆಡುವ ಕಾರ್ಯವಾಗಬೇಕು. ಕೇವಲ ಅರಣ್ಯ ಇಲಾಖೆ ಮಾತ್ರವಲ್ಲದೆ, ಸಂಘ-ಸಂಸ್ಥೆ, ಪರಿಸರ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಮುಂದಾಗಬೇಕಿದೆ. ಬಾಳು ಬಿದ್ದ ಕೆರೆ, ಸ್ಮಶಾನ, ಸರಕಾರಿ ಉದ್ಯಾನವನ ಹಾಗೂ ವಿವಿಧ ಶಾಲಾ-ಕಾಲೇಜುಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲೆಯಾದ್ಯಂತ ಹಮ್ಮಿಕೊಂಡ ಲಕ್ಷ ಸಸಿ ನೆಡುವ ಕಾರ್ಯದಲ್ಲಿ ಒಂದೇ ದಿನದಲ್ಲಿ 28 ಸಾವಿರಕ್ಕೂ ಅಧಿಕ ಸಸಿಗಳನ್ನು 65 ಸ್ಥಳಗಲ್ಲಿ ನೆಡುವ ಮೂಲಕ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಮುಂದಿನ ವಾರದಲ್ಲಿ ಉಳಿದ ಸಸಿಗಳನ್ನು ನೆಡಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿರು ಕಾರ್ಖಾನೆಯವರು ಬೆಳೆದ ಸಸಿಗಳನ್ನು ನೀಡುವ ಮೂಲಕ ಆಂದೋಲನಕ್ಕೆ ಸಹಕರಿಸಿದ್ದಾರೆ. ಮುಂದಿನ ಪೀಳಿಗೆಗೆ ಹಸಿರು ಪರಿಸರ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾರ್ಯ ಕೈಗೊಂಡಿದ್ದು, ಪ್ರತಿಯೊಬ್ಬರು ಕೈಜೋಡಿಸಲು ಸಲಹೆ ನೀಡಿದರು. ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ಬಿಟಿಡಿಎ ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಾನವನ ದುರಾಸೆಯಿಂದ ಕಾಡು ನಶಿಸಿ ಹೋಗುತ್ತಿದೆ. ಕಾಡು ಕಡಿಮೆಯಾದರೆ, ತಾಪಮಾನ ಹೆಚ್ಚಾಗುತ್ತಿರುವುದು ಈ ಬೇಸಿಗೆಯಲ್ಲಿಯೇ ಎಲ್ಲರ ಅನುಭವಕ್ಕೆ ಬಂದಿದೆ. ಮಳೆ ಕಡಿಮೆಯಾದರೆ ಉಷ್ಣತೆ ಹೆಚ್ಚಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಗಾಳಿ, ನೀರು, ಭೂಮಿ, ಆಕಾಶ ಸ್ವಚ್ಛವಾಗಿದ್ದು, ಮಳೆ ಬೆಳೆ ಚೆನ್ನಾಗಿ ಆಗಬೇಕಾದರೆ ಅರಣ್ಯ ವೃದ್ಧಿಯಾಗಬೇಕು. ಹಾಗಾಗಬೇಕಾದರೆ ಪ್ರತಿಯೊಬ್ಬರು ಕನಿಷ್ಠ ಗಿಡಗಳನ್ನು ನೆಡುವ ಸಂಕಲ್ಪ ಮಾಡಬೇಕು.

-ಆರ್‌.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವ

Share this article