ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಬಾಲ್ಯ ವಿವಾಹ ಮತ್ತು ಬಾಲ್ಯ ಗರ್ಭಾವಸ್ಥೆ ತಡೆಗಟ್ಟುವ ಕುರಿತು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಾಲ್ಯ ವಿವಾಹ ಎಂಬ ಪಿಡುಗು ಬಹುಕಾಲದಿಂದಲೂ ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ನಾನಾ ಕಾರಣಗಳಿಂದ ಬಾಲ್ಯ ವಿವಾಹ ಪದ್ಧತಿ ಬೆಳೆದು ಬಂದಿದೆ ಎಂದು ತಿಳಿಸಿದರು.
ದೇಶದಲ್ಲಿ ಮದುವೆಗೆ ಹೆಣ್ಣುಮಕ್ಕಳ ಸಮ್ಮತಿ ಪಡೆಯುವ ವಯಸ್ಸನ್ನು ಕಾಲ ಕಾಲಕ್ಕೆ ಹೆಚ್ಚಿಸುತ್ತಾ ಬರಲಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1929ರಲ್ಲಿ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಜಾರಿಗೊಳಿಸಲಾಯಿತು. 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಬಾಲ್ಯ ವಿವಾಹ ತಡೆ ಹೆಚ್ಚಿನ ಕಾನೂನಿನ ಬಲ ನೀಡಲಾಗಿದೆ ಎಂದರು.ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ದೇಶದಲ್ಲಿ 2.30 ಕೋಟಿ ಬಾಲ ವಧುಗಳಿದ್ದು, ಕರ್ನಾಟಕದಲ್ಲಿ 1.33 ಲಕ್ಷ ಬಾಲ ವಧುಗಳು ಇರುವುದು ತಿಳಿದು ಬಂದಿದೆ. ಈ ಸಂಖ್ಯೆಗಳು ಬಾಲ್ಯ ವಿವಾಹ ಎಂಬ ಪಿಡುಗಿನ ವ್ಯಾಪಕತೆಯನ್ನು ಸ್ಪಷ್ಟಪಡಿಸುತ್ತವೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಮಾತನಾಡಿ, ಬಾಲ್ಯ ವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಬಾಲ್ಯವಿವಾಹ ತಡೆಯುವುದು ಕೇವಲ ಒಂದು ಇಲಾಖೆ ಜವಾಬ್ದಾರಿ ಮಾತ್ರ ಅಲ್ಲ. ಎಲ್ಲ ಇಲಾಖೆಗಳು ಸೇರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಬಾಲ್ಯ ವಿವಾಹಗಳನ್ನು ತಡೆಗಟ್ಟೋಣ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿ ಕಾರ್ಯ ನಿರ್ವಹಿಸಲಾಗುವುದು. ಈ ಪಿಡುಗುಗಳು ಮಕ್ಕಳ ಮೇಲೆ ಬಹಳಷ್ಟು ದುಷ್ಪಾರಿಣಾಮ ಬೀರಲಿದೆ. ಇದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಹೌದು. ಹಾಗಾಗಿ ನಾವೆಲ್ಲರೂ ಸಮನ್ವಯತೆ, ಬದ್ಧತೆ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.