ನದಿ ತೀರದ ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಸ್ಥಗಿತ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಈಗಾಗಲೇ ನದಿ ತೀರದಲ್ಲಿರುವ ರೈತರು ಲಕ್ಷಾಂತರ ರು. ವೆಚ್ಚ ಮಾಡಿ ಭತ್ತ ನಾಟಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸ್ಥಗಿತ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ ಕೆಳಗಡೆ ಬರುವ ಗ್ರಾಮಗಳ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸ್ಥಗಿತ ಮಾಡಬೇಕೆಂದು ತಹಸೀಲ್ದಾರ್‌ ಕೆ. ಶರಣಮ್ಮ ಆದೇಶ ಹೊರಡಿಸಿದ್ದಾರೆ.ಬರಗಾಲದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ವಿದ್ಯುತ್‌ ಸ್ಥಗಿತಕ್ಕೆ ಮುಂದಾಗಿದ್ದು, ಡಿ. 28ರಂದು ವಿಜಯನಗರ ಜಿಲ್ಲಾಧಿಕಾರಿ ಮೌಖಿಕ ನಿರ್ದೇಶನದ ಮೇರೆಗೆ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜಿನ ಮೂಲ ಬನ್ನಿಗೋಳ ಗ್ರಾಮದ, ತುಂಗಭದ್ರಾ ನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿರುತ್ತದೆ. ಇನ್ನೂ 15-20 ದಿನಗಳ ವರೆಗೆ ಮಾತ್ರ ಪೂರೈಸಬಹುದಾಗಿದೆ. ಹೀಗಾಗಿ ಸಿಂಗಟಾಲೂರು ಬ್ಯಾರೇಜ್‌ನಿಂದ ಕೆಳಗೆ ಜ. 15ರಿಂದ 100 ಕ್ಯುಸೆಕ್ ನೀರನ್ನು ಪ್ರತಿ ತಿಂಗಳು ಮೇ 15ರ ವರೆಗೆ 4 ತಿಂಗಳು ನೀರು ಬಿಡಬೇಕಾಗಿರುವುದರಿಂದ ರಾಜವಾಳ, ಹೊನ್ನೂರು, ನವಲಿ, ಕೊಟ್ಟಿಕಲ್ಲು, ಕಾಗನೂರು, ಹೊನ್ನನಾಯಕನಹಳ್ಳಿ, ಕೊಂಬಳಿ, ಮದಲಗಟ್ಟಿ, ಪುರ, ಕಂದಗಲ್, ಸೋವೇನಹಳ್ಳಿ, ಹಕ್ಕಂಡಿ, ಕಾಲ್ವಿ ಹಾಗೂ ಅಂಕಲಿ ಗ್ರಾಮಗಳಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುವ ವಿದ್ಯುತ್ ಸ್ಥಗಿತಗೊಳಿಸಿ ವರದಿ ನೀಡುವಂತೆ ಜೆಸ್ಕಾಂ ಎಇಇಗೆ ಸೂಚನೆ ನೀಡಿದ್ದಾರೆ.ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುವ ವಿದ್ಯುತ್ ಸ್ಥಗಿತಗೊಳಿಸಿ 24 ಗಂಟೆಯ ಒಳಗಾಗಿ ತಹಸೀಲ್ದಾರ್‌ ಕಚೇರಿಗೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತಗೊಳಿಸಿದ ಬಗ್ಗೆ ವರದಿಯನ್ನು ನೀಡಲು ಸೂಚಿಸಿದ್ದಾರೆ. ತಪ್ಪಿದಲ್ಲಿ ಜೆಸ್ಕಾಂ ಎಇಇ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್‌ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ನದಿ ತೀರದಲ್ಲಿರುವ ರೈತರು ಲಕ್ಷಾಂತರ ರು. ವೆಚ್ಚ ಮಾಡಿ ಭತ್ತ ನಾಟಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸ್ಥಗಿತ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ರೈತರು ಭತ್ತದ ನಾಟಿ ಮಾಡುವ ಮೊದಲೇ ಸೂಚನೆ ನೀಡಿದ್ದರೆ ನಾವು ಮಾಡುತ್ತಿರಲಿಲ್ಲ. ಹೀಗೆ ಏಕಾಏಕಿ ವಿದ್ಯುತ್‌ ಕಡಿತ ಮಾಡಿದರೆ ನಮ್ಮ ಬದುಕು ಬೀದಿಗೆ ಬರಲಿದೆ ಎನ್ನುತ್ತಾರೆ ನದಿ ತೀರದ ರೈತರು.ಈ ಬಾರಿ ಭತ್ತಕ್ಕೆ ಬಂಪರ್‌ ಬೆಲೆ ಸಿಕ್ಕಿದೆ, ಮುಂಬರುವ ದಿನಗಳಲ್ಲಿ ಬತ್ತಕ್ಕೆ ಇನ್ನು ಹೆಚ್ಚಿನ ಬೆಲೆ ಬರಲಿದೆ ಎಂದು ಆಶಾವಾದಿಗಳಾಗಿ ಭತ್ತ ನಾಟಿ ಮಾಡಿದ್ದೇವೆ. ಈ ವಿದ್ಯುತ್‌ ಸ್ಥಗಿತದ ಕ್ರಮ ಅನ್ನದಾತರನ್ನು ಆತಂಕಕ್ಕೆ ಈಡು ಮಾಡಿದಂತಾಗಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.

ಮುನ್ನೆಚ್ಚರಿಕೆ ಕ್ರಮ: ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ ಕೆಳಗೆ ಬರುವ ಗ್ರಾಮಗಳಲ್ಲಿನ ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಸ್ಥಗಿತಗೊಳಿಸುವಂತೆ ತಹಸೀಲ್ದಾರ್‌ ಸೂಚನೆ ನೀಡಿದ್ದಾರೆ. ಅದರಂತೆ ನಾವು ಶುಕ್ರವಾರದಿಂದಲೇ ವಿದ್ಯುತ್‌ ಸ್ಥಗಿತ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ ಎಂದು ಎಇಇ, ಜೆಸ್ಕಾಂ ಗದುಗಿನ ಕೇದಾರನಾಥ.

ಸೂಚನೆ ನೀಡಿದ್ದೇವೆ: ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ, ಸಿಂಗಟಾಲೂರು ಬ್ಯಾರೇಜ್‌ನಿಂದ ಜ. 15ರಿಂದ 100 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ. ಆ ನೀರನ್ನು ಕುಡಿಯುಲು ಮಾತ್ರ ಬಳಕೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಸ್ಥಗಿತ ಮಾಡಲು ಸೂಚನೆ ನೀಡಿದ್ದೇವೆ ಎಂದು ತಹಸೀಲ್ದಾರ್‌ ಕೆ. ಶರಣಮ್ಮ ತಿಳಿಸಿದರು.

Share this article