ಹಾವೇರಿ: ಶರಣ ಸಂಸ್ಕೃತಿಯ ಸಾರ ಯಶಸ್ವಿ ಬದುಕಿನ ಸಿದ್ಧಾಂತವೇ ಆಗಿದ್ದು, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆಯ ಸತ್ಯ ಸಂಗತಿಗಳನ್ನು ಬಿತ್ತರಿಸಿ, ಆ ಕಾಲದ ಕ್ರಾಂತಿಯ ಸಂದೇಶಗಳನ್ನು ಎಲ್ಲ ಕಾಲಕ್ಕೂ ಪ್ರಸ್ತುತವಾಗಿಸಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿ, ವಚನ ಸಾಹಿತ್ಯ ಎಂಬುದು ನಿತ್ಯ ಸತ್ಯಗಳ ಅಭಿವ್ಯಕ್ತಿ. ಎಲ್ಲ ಕಾಲ ದೇಶಗಳಿಗೂ ಬೇಕಾಗುವ ಸಂಸ್ಕಾರದ ಸತ್ಯಗಳನ್ನು ವಚನಗಳು ಹೇಳಿವೆ. ಹೋರಾಟಗಳ ಜತೆ ಜತೆಗೆ ಸಾಮಾಜಿಕ ಅಗತ್ಯಗಳನ್ನು ವಚನಗಳು ನೀಡಿವೆ. ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಹಾಯಕರಾಗಿಯಲ್ಲದೆ ಸತ್ಯನಿಷ್ಠ ವಿಚಾರಗಳಿಗೆ ಶಕ್ತಿಯಾಗಿದ್ದರು. ಆಧ್ಯಾತ್ಮದ ಉತ್ತಂಗದಲ್ಲಿದ್ದು ಇಡೀ ಶರಣ ಪರಂಪರೆಯ ಮುಂಚೂಣಿಯಲ್ಲಿದ್ದರು. ಈಗ ಮನೆ ಮನೆಗಳಲ್ಲಿ ವಚನ ಸಂದೇಶಗಳು ಜಾಗ್ರತವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನೀಕಟ್ಟಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಿತ್ತರಿಸಿದ ವಚನ ಕಾಲ ಮುಂದಿನ ಶತಶತಮಾನಗಳಿಗೆ ಬೇಕಾಗುವ ಸಾಮಾಜಿಕ ಚಿಂತನೆಗಳನ್ನು ನೀಡಿದೆ. ವಚನಕಾರರು ತಮ್ಮ ನಿತ್ಯ ವೃತ್ತಿಯೊಂದಿಗೆ ಸಮಾಜದ ಹಿತಕ್ಕೆ ಶ್ರಮಿಸಿ ಇಡೀ ಬದುಕನ್ನು ಸಮಾಜಕ್ಕಾಗಿಯೇ ಅರ್ಪಿಸಿಕೊಂಡ ಮಹಾತ್ಮರು ಎಂದರು.ಹಂಚಿನಮನಿ ಆರ್ಟ್ ಗ್ಯಾಲರಿ ಸಂಸ್ಥಾಪಕ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಆಯುಕ್ತ ಪರಶುರಾಮ ಚಲವಾದಿ, ನಂದಿ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್. ಗುಜ್ರಿ, ಕನ್ನಡತಿ ಕಲಾ ತಂಡದ ಅಧ್ಯಕ್ಷೆ ಲತಾ ಎಂ. ಪಾಟೀಲ ಇದ್ದರು.
ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಸ್ವಾಗತಿಸಿದರು. ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಶಿವಬಸಪ್ಪ ಮುದ್ದಿ ವಂದಿಸಿದರು.