ಮಣಿಪಾಲ: ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳ ಮೇಲ್ವಿಚಾರಕಿಯರಿಗೆ ಸೌರಶಕ್ತಿ, ಸಾವಯವ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ, ಯೋಗ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಒಂದು ದಿನದ ಮಾಹಿತಿ ಕಾರ್ಯಕ್ರಮ ಬುಧವಾರ ಉಡುಪಿ ಬಾಲಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧ ಹಾದಿಮನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಬಿ.ವಿ.ಟಿ ಮಹಿಳಾ ಸಬಲೀಕರಣದ ಕ್ಷೇತ್ರದಲ್ಲಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಹಮ್ಮಿಕೊಳ್ಳುತ್ತಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಭಾರತೀಯ ವಿಕಾಸ ಟ್ರಸ್ಟ್‌ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಪ್ರಸ್ಥಾವನೆಗೈದರು. ಮಾಹಿತಿ ಕಾರ್ಯಕ್ರಮದಲ್ಲಿ ಅರುಣ್ ಪಟವರ್ಧನ್ ಮತ್ತು ಪ್ರವೀಣ್ ಸೌರಶಕ್ತಿ ಮತ್ತು ಜೀವನೋಪಾಯ ಸೌರ ಉಪಕರಣಗಳ ಬಗ್ಗೆ, ಸಾವಯವ ಕೃಷಿಕ ಗೋಪಾಲ ನಾಯಕ್ ಅವರು ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಪ್ರಕಾಶ್ ನಾಯಕ್ ಅವರು ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಸಖಿ ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿ, ಸಾಂತ್ವನ ಕೇಂದ್ರದ ಸಿಬ್ಬಂದಿ, ಬಾಲಭವನದ ಸಿಬ್ಬಂದಿ ಮತ್ತು ಯೋಜನಾ ಸಿಬ್ಬಂದಿ ಭಾಗವಹಿಸಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ದೀಪಾ ಸ್ವಾಗತಿಸಿದರು.