ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿ ಸುತ್ತಮುತ್ತ ಶನಿವಾರ ಸಂಜೆ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಲಕ್ಷಾಂತರ ರುಪಾಯಿ ಮೌಲ್ಯದ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹಾನಿಗೊಳಗಾಗಿವೆ ಎಂದು ಶಾಖಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೇಹಳ್ಳಿ ಪಟ್ಟಣದಿಂದ ವಿದ್ಯುತ್ ಸರಬರಾಜಾಗುವ ಮಲಸಾವರ, ಹೊಸಮನೆ, ಕೆಸಗೋಡು ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆಗೆ ಸಾಕಷ್ಟು ಮರಗಳು ಹಾಗೂ ರೆಂಬೆಕೊಂಬೆಗಳು ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಸುಮಾರು 15 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಹೇಳಿದರು. ಇನ್ನೂ ಸುಮಾರು 25ರಿಂದ 30 ಕಂಬಗಳು ಬಾಗಿದ್ದು, ಕೆಲವೆಡೆ ಸಿಡಿಲಿನ ಪರಿಣಾಮ ವಿದ್ಯುತ್ ಪರಿವರ್ತಕಗಳು ಕೂಡ ಹಾನಿಗೊಳಗಾಗಿರುವ ಸಾಧ್ಯತೆ ಇದೆ. ಈಗಾಗಲೇ ಸಣ್ಣ ಪ್ರಮಾಣದ ಹಾನಿಯಾಗಿರುವ ಪ್ರದೇಶಗಳಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ. ಆದರೆ ದೊಡ್ಡ ಪ್ರಮಾಣದ ಹಾನಿಯಾಗಿರುವ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿಯೇ ದುರಸ್ತಿ ಕಾರ್ಯ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ರಾತ್ರಿ ಸಮಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ಸಿಬ್ಬಂದಿಗೆ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾದ ಪ್ರದೇಶಗಳ ಗ್ರಾಹಕರು ಸಹಕರಿಸಬೇಕೆಂದು ಶಾಖಾಧಿಕಾರಿ ಮನವಿ ಮಾಡಿದ್ದಾರೆ.