ಧಾರ್ಮಿಕ ಕ್ಷೇತ್ರ ಪ್ರವಾಸ ತಾಣದಲ್ಲಿ ವಿದ್ಯುತ್ ಕಣ್ಮುಚ್ಚಾಲೆ ನಿರಂತರವಾಗುತ್ತಿದ್ದು, ಹೊಟೇಲ್‌ನವರಿಗೆ, ಧಾರ್ಮಿಕ ಕಾರ್ಯಕ್ಕೆ ಬರುವ ಮನೆಯವರಿಗೆ ತೀವ್ರ ತೊಂದರೆಯಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗೋಕರ್ಣ
ಧಾರ್ಮಿಕ ಕ್ಷೇತ್ರ ಪ್ರವಾಸ ತಾಣದಲ್ಲಿ ವಿದ್ಯುತ್ ಕಣ್ಮುಚ್ಚಾಲೆ ನಿರಂತರವಾಗುತ್ತಿದ್ದು, ಹೊಟೇಲ್‌ನವರಿಗೆ, ಧಾರ್ಮಿಕ ಕಾರ್ಯಕ್ಕೆ ಬರುವ ಮನೆಯವರಿಗೆ ತೀವ್ರ ತೊಂದರೆಯಾಗುತ್ತಿದೆ.
ಒಮ್ಮೆ ಜೋರಾಗಿ ಮಳೆ ಬಂದರೂ ಸಾಕು ವಿದ್ಯುತ್ ಕಡಿತಗೊಳ್ಳುತ್ತದೆ. ಇನ್ನೂ ಜೋರು ಗಾಳಿ ಬಂದರೆ ದಿನವಿಡಿ ಪೂರೈಕೆಯಲ್ಲಿ ವ್ಯತ್ಯಸವಾಗುತ್ತಿದೆ.
ಇಲ್ಲಿನ ವಿವಿಧೆಡೆಯಂದ ಅಧಿಕ ವಿದ್ಯುತ್ ಬಳಕೆಯಿಂದ ಹೆಸ್ಕಾಂನವರಿಗೆ ಆದಾಯ ಹೆಚ್ಚಿದ್ದರು, ಸೇವೆ ಮಾತ್ರ ಸಮರ್ಪಕವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.
ನಿರ್ಲಕ್ಷ್ಯ ಏಕೆ:
ಕಳೆದ ಎರಡು ವಾರದ ಹಿಂದೆ ಸರಣಿ ರಜೆ ಸಂದರ್ಭ ಸಂಜೆ ಕುಮಟಾದಿಂದ ಇಲ್ಲಿಗೆ ವಿದ್ಯುತ್ ಪೂರೈಕೆಯಾಗುವ ಮುಖ್ಯ ಲೈನ್ ಮೇಲೆ ಮರ ಬಿದ್ದಿತ್ತು. ಇದನ್ನ ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ಹರಸಾಹಸ ಮಾಡಿದ್ದರು. ಆದರೆ ೧೦ ತಾಸಿಗೂ ಅಧಿಕ ಕಾಲ ವಿದ್ಯುತ್ ನಿಂತಿತ್ತು,
ಇದರಿಂದ ಜನರ ಪರದಾಟ ಹೇಳ ತೀರದಾಗಿತ್ತು. ಇಂತಹ ತುರ್ತು ಸಂದರ್ಭದಲ್ಲಿ ಅನುಕೂಲಕ್ಕಾಗಿ ಅಂಕೋಲಾದಿಂದ ಇಲ್ಲಿನ ಗ್ರೀಡ್‌ಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಆದರೆ ಈ ಮಾರ್ಗವು ಹಳೆಯ ಕಾಲದ ತಂತಿ, ಬೀಳುವ ಹಂತದ ಕಂಬಗಳಿಂದ ಸರಿಯಾಗಿರದ ಕಾರಣ ಬಳಕೆ ಬರುತ್ತಿಲ್ಲ. ೨೦ ಕಿಮೀ ದೂರದ ಮಾರ್ಗವನ್ನ ಪ್ರವಾಸಿ ತಾಣ ಎಂದಾದರೂ ಗುರುತಿಸಿ ಹೊಸದಾಗಿ ಮಾಡಬೇಕಿತ್ತು, ಆದರೆ ಈವರೆಗೂ ನಿರ್ಲಕ್ಷಿಸಲಾಗಿದೆ.
ಕನಸಾಗಿ ಉಳಿದ ಉಳುವರೆ ಗ್ರೀಡ್:
ಅಂಕೋಲಾ ತಾಲೂಕಿನ ಉಳುವರೆಯಲ್ಲಿ ಹೆಸ್ಕಾಂನವರು ಗ್ರೀಡ್ ಸ್ಥಾಪನೆಗೆ ಯೋಜನೆ ರೂಪಿಸಿದ್ದರು. ಇದರಿಂದ ಅಂಕೋಲಾ ವ್ಯಾಪ್ತಿಯ ಅಚವೆ, ಹಿಲ್ಲೂರು, ಗೋಕರ್ಣ, ಹನೇಹಳ್ಳಿ ಗಂಗಾವಳಿ, ಬರ್ಗಿಯವರಗೆ ವಿದ್ಯುತ್ ಪೂರೈಕೆಯ ಉದ್ದೇಶ ಇತ್ತು. ಅರಣ್ಯ ಇಲಾಖೆಯ ಜಾಗದಲ್ಲಿ ಗ್ರೀಡ್ ನಿರ್ಮಿಸಲು ಇಲಾಖೆ ಅನುಮತಿ ಕೋರಲಾಗಿತ್ತು. ಇಲಾಖೆ ಅನುಮತಿ ನೀಡುವ ಹಂತದಲ್ಲಿದ್ದಾಗ ಹಿರೇಗುತ್ತಿ ವಲಯದ ವ್ಯಾಪ್ತಿಗೆ ಬರುವ ಜಾಗ, ನೂತನವಾಗಿ ಆರಂಭವಾದ ಹೊಸಕಂಬಿ ವಲಯ ವ್ಯಾಪ್ತಿಗೆ ಸೇರಿಸಲಾಯಿತು. ಇದರಿಂದ ಅನುಮತಿ ಪ್ರಕ್ರಿಯೆ ನನೆಗುದಿಗೆ ಬಿದ್ದು, ಯೋಜನೆಯ ಕನಸು ಮೂಲೆ ಸೇರಿತು. ಈ ಗ್ರೀಡ್ ನಿರ್ಮಾಣವಾದರೆ ಕೇವಲ ೧೦ ಕಿಮೀ ಮಾತ್ರ ಮುಖ್ಯ ವಿದ್ಯುತ್ ಮಾರ್ಗವಾಗುತ್ತದೆ ಇದರಿಂದ ನಿರ್ವಹಣೆ ಸಹ ಸರಳವಾಗಿರುತ್ತದೆ.
ಮನೆಗಳಿಗೆ ವಿದ್ಯುತ್ ಪೂರೈಕೆಯಾಗುವ ಹಲವು ಕಡೆಗಳಲ್ಲಿ ವಿದ್ಯುತ್ ಪರಿವರ್ತಕದ ಸಾಮರ್ಥ್ಯಕ್ಕಿಂತ ಹೆಚ್ಚು ಸಂಪರ್ಕ ನೀಡಲಾಗಿದ್ದು, ಇದರಿಂದ ಗೃಹೋಪಯೋಗಿ ವಿದ್ಯುತ್ ಉಪಕರಣ ಬಳಕೆಗೆ ತೊಡಕಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಹೆಚ್ಚಿನ ವಿದ್ಯುತ್ ಹೆಚ್ಚು ಪ್ರಸರಿಸಿ (ಓವರ್ ಲೋಡ್) ವಿದ್ಯುತ್ ಉಪಕರಣ ಸುಟ್ಟು ಹಾನಿಯಾಗುತ್ತಿದೆ.
ಸಿಬ್ಬಂದಿ ಕೊರತೆ:
ಇಲ್ಲಿ ಪೂರೈಕೆಯಾಗುವ ಮುಖ್ಯ ವಿದ್ಯುತ್ ಮಾರ್ಗದಿಂದ ಮನೆ, ಮನೆಗೆ ನೀಡುವ ವಿದ್ಯುತ್ ಪೂರೈಸುವ ಮಾರ್ಗ ಸೇರಿ ೧೫೦ ಕಿಮೀ ಆಗುತ್ತದೆ. ಇದರಲ್ಲಿ ಅರಣ್ಯ ಪ್ರದೇಶ, ನದಿಯಂಚು ಎಲ್ಲವು ಒಳಗೊಂಡಿದೆ. ಇವೆಲ್ಲದರ ನಿರ್ವಹಣೆಗೆ ಇಲ್ಲಿನ ಹೆಸ್ಕಾಂ ಶಾಖೆಗೆ ಒಟ್ಟು ೨೮ ಸಿಬ್ಬಂದಿ ಮಂಜೂರಾತಿ ಇದೆ. ಆದರೆ ಹಾಲಿ ಕಾರ್ಯನಿರ್ವಹಿಸುತ್ತಿರುವ ೧೦ ಸಿಬ್ಬಂದಿ ಮಾತ್ರ. ಒಟ್ಟು ೧೮ ಸಿಬ್ಬಂದಿ ಕೊರತೆ ಇದ್ದು, ಸಿಬ್ಬಂದಿಗೆ ನೇಮಕಾತಿ ಆಗಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.