ನೀರಾವರಿ ಯೋಜನೆಗಳಿಗೆ ವಿದ್ಯುತ್‌ ಅಭಾವ, ವಿಜಯೇಂದ್ರ ಆಕ್ರೋಶ

KannadaprabhaNewsNetwork |  
Published : Jul 22, 2026, 02:15 AM IST
ರಟ್ಟೀಹಳ್ಳಿ ತಾಲೂಕಿನ ಚಟ್ನಳ್ಳಿ ಗ್ರಾಮದ ಉಡಗಣಿ, ತಾಳಗುಂದ ಹಾಗೂ ಹೊಸೂರ ಏತ ನೀರಾವರಿ ಯೋಜನೆಯ ಜಾಕ್‍ವೆಲ್ ಬಳಿ ಕೆರೆ ತುಂಬಿಸುವ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಶಾಸಕ ಬಿಸಿ ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ಧರಣಿ ನಡೆದಲಾಯಿತು. | Kannada Prabha

ಸಾರಾಂಶ

ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗದ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ: ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗದ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಚಟ್ನಳ್ಳಿ ಗ್ರಾಮದ 850 ಕೋಟಿ ವೆಚ್ಚದ ಉಡಗಣಿ, ತಾಳಗುಂದ ಹಾಗೂ ಹೊಸೂರ ಏತ ನೀರಾವರಿ ಯೋಜನೆಯ ಜಾಕ್‍ವೆಲ್ ಬಳಿ ರಟ್ಟೀಹಳ್ಳಿ-ಹಿರೇಕೆರೂರ ಹಾಗೂ ಶಿಕಾರಿಪುರ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ವರುಣನ ಕಣ್ಣಾ ಮುಚ್ಚಾಲೆಯಿಂದಾಗಿ ರೈತ ಕಂಗಾಲಾಗಿದ್ದು, ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿ ಯೋಜನೆಗಳು ಸಹಕಾರಿಯಾಗಿವೆ. ಆ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 850 ಕೋಟಿ ವೆಚ್ಚದಲ್ಲಿ ಉಡಗಣಿ, ತಾಳಗುಂದ ಹಾಗೂ ಹೊಸೂರ ಏತ ನೀರಾವರಿ ಯೋಜನೆ ಹಾಗೂ ರಟ್ಟೀಹಳ್ಳಿ-ಹಿರೇಕೆರೂರು ತಾಲೂಕಿನ ಗುಡ್ಡದಮಾದಾಪುರ, ಸರ್ವಜ್ಞ ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ಆದರೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗದೆ ಕೈ ಚೆಲ್ಲಿ ಕುಳಿತಿರುವುದು ದುರದೃಷ್ಟಕರ. ದೇಶಕ್ಕೆ ಅನ್ನ ನೀಡುವಂತ ರೈತರಿಗೆ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ, ಬಿಜೆಪಿ ಅದಕ್ಕೆ ಆಸ್ಪದ ನೀಡದೆ ರೈತರಿಗಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವಿದೆ ಎಂದರು.

ಮುಖ್ಯಮಂತ್ರಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಕೆರೆಗೆ ನೀರು ತುಂಬಿಸುವಂತ ಎಲ್ಲ ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಮಳೆಯ ಅಭಾವದಿಂದ ರೈತ ಸಂಕಷ್ಟದಲ್ಲಿದ್ದರೂ ಇನ್ನೂವರೆಗೆ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗುತ್ತಿಲ್ಲ, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೇವಲ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಎಸಿ ರೂಂಗಳಲ್ಲಿ ಅಧಿಕಾರಿಗಳ ಜೊತೆ ಕಾಲಹರಣ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಬೊಟ್ಟು ಮಾಡುವುದನ್ನು ಬಿಟ್ಟು ಮುಖ್ಯ ಮಂತ್ರಿಗಳು ಬರ ಪ್ರದೇಶಗಳಲ್ಲಿ ಓಡಾಡಿ ಜನರ ಸಂಕಷ್ಟಗಳನ್ನು ಆಲಿಸುವಂತೆ ಆಗ್ರಹಿಸಿದರು.

ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಬಿಜೆಪಿ ಆಡಳಿತದ ಅವಧಿಯಲ್ಲಿನ ಯೋಜನೆಗಳಿಗೆ ನಮ್ಮ ತಾಲೂಕಿನ ಶಾಸಕರು ಕೇವಲ ಟೇಪ್ ಕಟ್ ಮಾಡಿಕೊಂಡು ಓಡಾಡುತ್ತಿದ್ದಾರೆ ಹೊರತು ಅವಳಿ ತಾಲೂಕಿನಲ್ಲಿ ಅವರಿಂದ ಒಂದು ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಗೇಲಿ ಮಾಡಿದರು. ಅವಳಿ ತಾಲೂಕಿನ ನೂರಾರು ಕೆರೆಗಳಿಗೆ ನೀರು ತುಂಬಿಸುವ ಸರ್ವಜ್ಞ ಏತ ನೀರಾವರಿ, ಗುಡ್ಡದಮಾದಾಪುರ ಏತ ನೀರಾವರಿ, ಚಟ್ನಳ್ಳಿ ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ಕರೆಂಟ್ ನೀಡಲು ಈ ಸರ್ಕಾರದಿಂದ ಆಗುತ್ತಿಲ್ಲ, ಕೇವಲ 2-3 ಗ್ಯಾರಂಟಿಗಳನ್ನು ಪ್ರಚಾರಕ್ಕೆ ಬಳಸಿಕೊಂಡು ಓಡಾಡುವುದೇ ಇವರ ಸಾಧನೆಯಾಗಿದೆ, ಗ್ಯಾರಂಟಿಗಳಿಂದ ರಾಜ್ಯದ ಜನತೆಯ ಹೊಟ್ಟೆ ತುಂಬುವುದಿಲ್ಲ ಕೆರೆ ತುಂಬಿಸುವ ಮಹತ್ತರ ಯೋಜನೆಗಳಿಗೆ ಸಮರ್ಪಕ ಕರೆಂಟ್ ನೀಡಿದರೆ ಮಾತ್ರ ಅನ್ನದಾತ ಅನ್ನ ಬೆಳೆದು ರಾಜ್ಯದ ಜನತೆಯ ಹೊಟ್ಟೆ ತುಂಬಿಸುತ್ತಾನೆ. ಕಾರಣ ಅಂತ ಯೋಜನೆಗಳಿಗೆ ಆದ್ಯತೆ ನೀಡಿ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಬಸವರಾಜ ಮಾತನಾಡಿ, ಕಳೆದ 15 ದಿನಗಳಿಂದ ಗ್ರೀಡ್‍ಗಳಲ್ಲಿ ಅನಾನುಕೂಲವಾದ್ದರಿಂದ ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿರಲಿಲ್ಲ. ಆದರೆ ಕಳೆದ 18ನೇ ತಾರೀಖಿನಿಂದ ಎಲ್ಲ ತೊಂದರೆಗಳನ್ನು ಸರಿಪಡಿಸಿದ್ದು ಇನ್ನೂ ಮುಂದೆ ಎಲ್ಲ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ಮಾಜಿ ಶಾಸಕ ಡಿ.ಎಂ. ಸಾಲಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ್, ರಾಣಿಬೆನ್ನೂರ ಮಾಜಿ ಶಾಸಕ ಅರುಣಕುಮಾರ ಪೂಜಾರ, ರಟ್ಟೀಹಳ್ಳಿ ಬಿಜೆಪಿ ಮಂಡಳ ಅಧ್ಯಕ್ಷ ದೇವರಾಜ ನಾಗಣ್ಣನವರ, ಆರ್.ಎನ್. ಗಂಗೋಳ, ಹನಮಂತಪ್ಪ ಗಾಜೇರ, ಶಿವಮೊಗ್ಗ ರೈತ ಮೋರ್ಚಾ ಅಧ್ಯಕ್ಷ ಸಿದ್ಲಿಂಗಪ್ಪ, ಗುರುಮೂರ್ತಿ, ಹನಮಂತಪ್ಪ, ಯೋಗಿಶ ಹಾಗೂ ವಿವಿಧ ರೈತ ಮೋರ್ಚಾದ ಸದಸ್ಯರು ಇದ್ದರು.

ಭೀಕರ ಬರದ ಸಂಕಷ್ಟ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೇವಲ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಕೈಕಟ್ಟಿ ಕುಳಿತಿರುವುದು ನೋಡಿದರೆ ರಾಜ್ಯದ ಸಾಮಾನ್ಯ ಜನರು ಹಾಗೂ ರೈತರು ಗೇಲಿ ಮಾಡಿ ನಗುವಂತಾಗಿದೆ, ಇವರ ಯೋಗ್ಯತೆಗೆ ರಾಜ್ಯದ ರೈತರ ಕಣ್ಣೀರು ಒರೆಸುವಂತ ಕೃಷಿ ಮಂತ್ರಿಯನ್ನು ನೇಮಕ ಮಾಡಲಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟದಲ್ಲಿ ಹೊಸಬರಿಗೆ ಅವಕಾಶ ಹೈಕಮಾಂಡ್‌ಗೆ ಬಿಟ್ಟದ್ದು: ಜಾರಕಿಹೊಳಿ
ರೈತರಲ್ಲಿ ಒಡಕು ಮೂಡಿಸುತ್ತಿರುವ ಸರ್ಕಾರ: ವೀರೇಶ ಸೊಬರದಮಠ