ಹೊಸಪೇಟೆ: ಪವರ್‌ ಸ್ಟಾರ್‌ ಪುನೀತ್‌ ಅಭಿಮಾನಿಗಳಿಂದ ಜನ್ಮದಿನ ಆಚರಣೆ

KannadaprabhaNewsNetwork |  
Published : Mar 18, 2025, 12:35 AM IST
17ಎಚ್‌ಪಿಟಿ7- ಹೊಸಪೇಟೆಯಲ್ಲಿ ಸೋಮವಾರ ಅಪ್ಪು ಜನ್ಮದಿನ ನಿಮಿತ್ತ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಡಿವೈಎಸ್ಪಿ ಡಾ.ತಳವಾರ ಮಂಜುನಾಥ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಪವರ್‌ ಸ್ಟಾರ್‌ ಡಾ. ಪುನೀತ್ ರಾಜಕುಮಾರ ಅವರ ಜನ್ಮದಿನವನ್ನು ಸೋಮವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು ವಿಶೇಷ ಪೂಜೆ, ಕೇಕ್ ಕತ್ತರಿಸಿ, ಬಿರಿಯಾನಿ ವಿತರಿಸುವ ಮೂಲಕ ಆಚರಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪವರ್‌ ಸ್ಟಾರ್‌ ಡಾ. ಪುನೀತ್ ರಾಜಕುಮಾರ ಅವರ ಜನ್ಮದಿನವನ್ನು ಸೋಮವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು ವಿಶೇಷ ಪೂಜೆ, ಕೇಕ್ ಕತ್ತರಿಸಿ, ಬಿರಿಯಾನಿ ವಿತರಿಸುವ ಮೂಲಕ ಆಚರಿಸಿದರು.

ಇಲ್ಲಿನ ಪುನೀತ್‌ ರಾಜಕುಮಾರ್ ವೃತ್ತದಲ್ಲಿರುವ ಅಪ್ಪು ಪುತ್ಥಳಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ, ಬಳಿಕ ಬರೋಬ್ಬರಿ 25 ಕೆಜಿ ತೂಕದ ಕೇಕ್ ಕತ್ತರಿಸಿ ಅಪ್ಪುಗೆ ಜೈಕಾರ ಕೂಗಿದರು. ನಂತರ ಅಭಿಮಾನಿಗಳು ಅಪ್ಪುಗೆ ಇಷ್ಟವಾದ ಬಿರಿಯಾನಿ, ಅನ್ನದಾಸೋಹ ಮಾಡಿದರು.

ಡಿವೈಎಸ್ಪಿ ಡಾ. ತಳವಾರ ಮಂಜುನಾಥ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ನೆಚ್ಚಿನ ನಟನ ಜನ್ಮದಿನ ಆಚರಣೆ ಹಿನ್ನೆಲೆ ಸುತ್ತಮುತ್ತಲಿನ ವಿವಿಧ ಹಳ್ಳಿಗಳಿಂದ ಬಂದಿದ್ದ ನೂರಾರು ಅಭಿಮಾನಿಗಳು ಚಿಕನ್, ಪಲಾವ್, ಬದನೆಕಾಯಿ ಪಲ್ಯ, ನುಗ್ಗೇಕಾಯಿ ಸಾಂಬಾರ್ ಸವಿದರು.

ಅಪ್ಪು ಇಷ್ಟದ ಬಿರಿಯಾನಿ ಸವಿಯಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ಅಪ್ಪು ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು. ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಪಟ್ಟಣ ಠಾಣೆಯ ಸಿಪಿಐ ಲಖನ್ ಆರ್. ಮಸಗುಪ್ಪಿ ಕೇಕ್ ಕತ್ತರಿಸಿದರು.

ಅಪ್ಪು ಜನ್ಮದಿನದ ಹಿನ್ನೆಲೆ ಬೆಳಗ್ಗೆಯಿಂದಲೇ ಅಪ್ಪು ಪುತ್ಥಳಿ ಎದುರು ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಸಂಜೆವರೆಗೆ ಪುತ್ಥಳಿ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಪುನೀತ್‌ ರಾಜ್‌ಕುಮಾರ ತಂಗುದಾಣಕ್ಕೆ ಚಾಲನೆ:

ಇಲ್ಲಿನ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ತಂಗುದಾಣ ಉದ್ಘಾಟನಾ ಸಮಾರಂಭ ನಡೆಯಿತು. ಅಪ್ಪು ಯೂತ್‌ ಬ್ರಿಗೇಡ್ ವತಿಯಿಂದ ನಡೆದ ಕಾರ್ಯಕ್ರಮವನ್ನು

ಶಾಸಕ ಎಚ್. ಆರ್. ಗವಿಯಪ್ಪ ಕೇಕ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿದರು. ಹುಡಾ ಅಧ್ಯಕ್ಷ ಎಚ್. ಎನ್. ಮಹಮ್ಮದ್ ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ ಹಾಗೂ ನಗರಸಭೆ ಸದಸ್ಯರು, ಅಪ್ಪು ಯೂತ್‌ ಬ್ರಿಗೇಡ್‌ನ ಪದಾಧಿಕಾರಿಗಳು ಇದ್ದರು. ನಗರ ಸೇರಿದಂತೆ ಕಮಲಾಪುರ ಮತ್ತು ಜಿಲ್ಲೆಯ ಇತರೆಡೆ ಕೂಡ ಡಾ. ಪುನೀತ್‌ ರಾಜ್‌ಕುಮಾರ ಅಭಿಮಾನಿಗಳು ಅಪ್ಪು ಜನ್ಮದಿನ ಆಚರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ