
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಅಕ್ರಂ, ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆಗಳ ಕುರಿತು ಸಭೆ
ಜಿಲ್ಲೆಯಲ್ಲಿ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಹಾಗೂ ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆಗಳ ಕುರಿತು ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ ಮೇರೆಗೆ ಮೆಸ್ಕಾಂ ಎಂಡಿ ಚಿಕ್ಕಮಗಳೂರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಲ್ಲಿ ಕೊರತೆಯಾಗಿದ್ದು, ವಿಶೇಷವಾಗಿ ಬಯಲು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿಯೂ ಇಂಧನ ಸಚಿವರ ಗಮನಕ್ಕೆ ತಂದು, ಮೌಖಿಕವಾಗಿ ಹಾಗೂ ಪತ್ರದ ಮೂಲಕ ಮನವಿ ಮಾಡಲಾಗಿತ್ತು ಎಂದರು.ಸಭೆಯಲ್ಲಿ ವಿದ್ಯುತ್ ಪೂರೈಕೆಯನ್ನು ಈ ಹಿಂದಿನ ವ್ಯವಸ್ಥೆಯಂತೆ ಮುಂದುವರಿಸಲು ಮನವಿ ಮಾಡಿದ್ದು, ಕಡಿತಗೊಳಿ ಸಲಾಗಿದ್ದ ಸುಮಾರು ಎರಡೂವರೆ ಗಂಟೆಗಳ ಪೂರೈಕೆಯನ್ನು ಮರುಸ್ಥಾಪಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಳಸಾಪುರ ಮತ್ತು ನಿಡಘಟ್ಟದಲ್ಲಿ ೧೧೦ ಎಂವಿಎ ಸಾಮರ್ಥ್ಯವನ್ನು ೨೧೦ ಎಂವಿಎಗೆ ಹೆಚ್ಚಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗಾಣದಾಳು ಕೇಂದ್ರದ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಅರಣ್ಯ ಇಲಾಖೆ ಅನುಮತಿ ಪಡೆದು ಒಂದು ವಾರದೊಳಗೆ ಚಾರ್ಜ್ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.೯೪ ಲೈನ್‌ಮ್ಯಾನ್‌ಗಳ ನೇಮಕ:ಜಿಲ್ಲೆಯಲ್ಲಿ ಈ ಹಿಂದೆ ಲೈನ್‌ಮ್ಯಾನ್‌ಗಳ ಕೊರತೆ ಇದ್ದು, ಇದೀಗ ೯೪ ಲೈನ್‌ಮ್ಯಾನ್ ನೇಮಕ ಮಾಡಲಾಗಿದೆ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದು, ಸಿಬ್ಬಂದಿ ಕೊರತೆ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಮೆಸ್ಕಾಂ ಸಿಬ್ಬಂದಿ ೨೪*೭ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.ಸಾಮಾನ್ಯವಾಗಿ ಜನವರಿ ಬಳಿಕ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್‌ನಲ್ಲಿಯೇ ಬೇಡಿಕೆ ಹೆಚ್ಚಾಗಿದೆ. ಮಳೆ ಹಾಗೂ ಚಂಡಮಾರುತದ ಪರಿಣಾಮ ಇತ್ತೀಚೆಗೆ ಬೇಡಿಕೆ ಸ್ವಲ್ಪ ಕಡಿಮೆಯಾಗಿದ್ದರೂ, ಅಕ್ಟೋಬರ್ ೧ರಿಂದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆಯಾಗಲಿದೆ ಎಂದು ಹೇಳಿದರು.ಇತರ ರಾಜ್ಯಗಳಿಂದ ವಿದ್ಯುತ್ ಲಭ್ಯ:ರಾಜ್ಯದಲ್ಲಿ ಜಾರಿಯಲ್ಲಿರುವ ವಿದ್ಯುತ್ ‘ಬ್ಯಾಂಕಿಂಗ್ ಸಿಸ್ಟಂ’ ಸೆ.೩೦ಕ್ಕೆ ಪೂರ್ಣಗೊಳ್ಳಲಿದೆ. ಮಳೆಗಾಲದಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಇತರ ರಾಜ್ಯಗಳಿಗೆ ನೀಡಿ, ಅಗತ್ಯವಿದ್ದಾಗ ಅಲ್ಲಿಂದ ವಿದ್ಯುತ್ ಪಡೆಯುವ ವ್ಯವಸ್ಥೆ ಇದಾಗಿದೆ. ಅಕ್ಟೋಬರ್ ೧ರಿಂದ ಜಾರ್ಖಂಡ್ ಸೇರಿದಂತೆ ಇತರ ರಾಜ್ಯಗಳಿಂದ ರಾಜ್ಯಕ್ಕೆ ವಿದ್ಯುತ್ ಲಭ್ಯವಾಗಲಿದ್ದು, ಇದರಿಂದ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಪ್ರಸ್ತುತ ಎದುರಾಗಿರುವ ವಿದ್ಯುತ್ ಸಮಸ್ಯೆಗಳಲ್ಲಿ ಬಹುತೇಕ ಪರಿಹಾರವಾಗಲಿದೆ ಎಂದರು.ರೈತರ ತೋಟಗಾರಿಕಾ ಬೆಳೆಗಳಿಗೆ ನೀರಾವರಿ, ಮನೆಗಳ ದೈನಂದಿನ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನಿರಂತರ ವಿದ್ಯುತ್ ಅಗತ್ಯವಿದ್ದು, ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಪ್ರಮುಖ ಆಗ್ರಹ:- ಕಳಸಾಪುರ ಎಂಯುಎಸ್‌ಆರ್ ಕೇಂದ್ರದಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಕೆ ಕಾಮಗಾರಿ ಶೀಘ್ರ ಆರಂಭಿಸುವುದು.- ಕಳಸಾಪುರ ೬೬ ಕೆ.ವಿ. ಮಾರ್ಗವನ್ನು ಡಬಲ್ ಸರ್ಕ್ಯೂಟ್ ಮಾರ್ಗವಾಗಿ ಪರಿವರ್ತಿಸುವುದು.- ಗಾಣದಾಳು ಎಂಯುಎಸ್‌ಆರ್ ಕೇಂದ್ರಕ್ಕೆ ಅಗತ್ಯದ ಸ್ಟೇಜ್-೨ ಅರಣ್ಯ ಅನುಮತಿ ತ್ವರಿತ ಪಡೆಯುವುದು.- ಗೋವಿಂದಪುರದಲ್ಲಿ ಹೊಸ ಎಂಯುಎಸ್‌ಆರ್ ಕೇಂದ್ರ ಸ್ಥಾಪನೆಗೆ ಡಿಪಿಆರ್ ಸಿದ್ಧಪಡಿಸಿ ಟೆಂಡರ್ - ನಿಡಘಟ್ಟ ಎಂಯುಎಸ್‌ಆರ್ ಕೇಂದ್ರದ ಪರಿವರ್ತಕಗಳ ಮೇಲ್ದರ್ಜೆಗೇರಿಸುವ ಕಾಮಗಾರಿ ತ್ವರಿತಗೊಳಿಸುವುದು.- ಬಾಣೂರು ಹೊಸಳ್ಳಿ ಸಮೀಪ ೨೨೦/೧೧೦/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶೀಘ್ರ ಅನುಮೋದನೆ ನೀಡುವುದು.- ಕ್ಷೇತ್ರದ ಎರಡು ತಾಲೂಕುಗಳ ಉಪವಿಭಾಗಗಳಿಗೆ ಪರಿವರ್ತಕಗಳ ದುರಸ್ತಿ, ಹೆಚ್ಚುವರಿ ಪರಿವರ್ತಕ ಅಳವಡಿಕೆಗೆ ತಲಾ ₹೨ ಕೋಟಿ ವಿಶೇಷ ಅನುದಾನ ನೀಡುವುದು.