ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ ಮಂಗಳೂರು ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ನಡೆಸುತ್ತಿರುವ ೨ನೇ ವರ್ಷದ ಮಹಿಳಾ ಹಾಗೂ ಪುರುಷ ಬೆಂಚ್‌ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.ಇದೇ ವೇಳೆ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆ ಜನಪ್ರಿಯವಾಗಿರುವಂತೆ ಹಾಸನ ಜಿಲ್ಲೆಯಲ್ಲಿಯೂ ಕೂಡ ಹೆಸರು ಮಾಡಲಿ. ಅನೇಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸರಕಾರಿ ನೌಕರರ ಗೃಹ ನಿರ್ಮಾಣ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳುವಂತಹ ಕ್ರೀಡೆ ಪವರ್ ಲಿಫ್ಟಿಂಗ್ ಆಗಿದೆ. ಇಂತಹ ಕ್ರೀಡೆ ಹಾಸನ ಜಿಲ್ಲೆಯಲ್ಲಿ ಹೆಚ್ಚು ಬೆಳೆಯಬೇಕು. ದಕ್ಷಿಣ ಕನ್ನಡ ಮತ್ತು ಬೇರೆ ಬೇರೆ ಕಡೆ ಈ ಕ್ರೀಡೆ ಹೆಚ್ಚು ಒಲವಿದೆ. ಈ ಸಂಸ್ಥೆಯು ಇಂತಹ ಕ್ರೀಡೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಗೌರವಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಜನ ಕ್ರೀಡಾಪಟುಗಳಿದ್ದು, ಈ ಸಂಸ್ಥೆಯಲ್ಲಿ ನನ್ನನ್ನು ಗೌರವಾಧ್ಯರನ್ನಾಗಿ ಮಾಡಿರುವುದು ಸಂತೋಷ ತಂದಿದೆ. ಇಂತ ಚಟುವಟಿಕೆ ಹೆಚ್ಚೆಚ್ಚು ನಡೆಯಲಿ ಎಂದರು.
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥಾಪಕ ಕಾರ್ಯದರ್ಶಿ ಹನುಮಂತೇಗೌಡ ಮಾತನಾಡಿ, ಪವರ್ ಲಿಪ್ಟಿಂಗ್‌ಗೆ ಜನರಿಂದ ಪೂರ್ಣ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿರುವುದಿಲ್ಲ. ಸಿಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನಿಯರ್/ಸೀನಿಯರ್/ಮಾಸ್ಟರ್ ವಿಭಾಗಗಳಲ್ಲಿ ಅತ್ಯುತ್ತಮ ಸ್ಪರ್ಧಿಗಳಿಗೆ ವಿನ್ನರ್ ಟೀಮ್ ಚಾಂಪಿಯನ್ ಶಿಫ್ ಮತ್ತು ರನ್ನರ್ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿ ಸಿಗಲಿದೆ. ಸ್ಟ್ರಾಂಗ್‌ಮೆನ್, ಸ್ಟ್ರಾಂಗ್ ವುಮೆನ್ ಪ್ರಶಸ್ತಿಗಳು ಪ್ರತಿ ವಿಭಾಗದಲ್ಲಿ ನೀಡಲಾಗುವುದು. ಪ್ರತಿ ತೂಕ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ಸ್ಥಾನಧಾರಿಗಳಿಗೆ ಮೆಡಲ್ ಮತ್ತು ಪ್ರಮಾಣಪತ್ರ, ರಾಜ್ಯ ಮಟ್ಟದ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ನಡೆಯಲಿದೆ ಎಂದು ವಿವರಿಸಿದರು.೨ನೇ ವರ್ಷದ ಮಹಿಳಾ ಹಾಗೂ ಪುರುಷ ಬೆಂಚ್‌ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿವಿಧ ಭಾಗಗಗಳಿಂದ ಭಾಗವಹಿಸಿ ಬಹುಮಾನಗಳಿಸಿದರು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಡಲ್ ಪಡೆದ ಕ್ರೀಡಾಪಟುಗಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ನಿರ್ದೇಶಕ ನಿರಂಜನ್ ರಾಜ್, ಅಂತಾರಾಷ್ಟ್ರೀಯ ತೀರ್ಪುಗಾರರು ಉಮೇಶ್, ತೀರ್ಪುಗಾರರಾದ ಪ್ರಕಾಶ್, ಜಯರಾಂ, ರಾಷ್ಟ ಮಟ್ಟದ ಮಧು ಚಂದ್ರ, ತೀರ್ಪುಗಾರ ಮೋಹನ್ ರಾಜ್, ಖಜಾಂಚಿ ಅಶ್ವಥ್, ಸಂಘಟನಾ ಕಾರ್ಯದರ್ಶಿ ಎಂ. ಶಿವಸ್ವಾಮಿ, ನಿರ್ದೇಶಕ ಎಚ್.ವಿ. ಲೋಕೇಶ್, ಕೆ. ಎಚ್. ಸಿಂಚನಾ, ಸಂತೋಷ್ ಇತರರು ಉಪಸ್ಥಿತರಿದ್ದರು.