ತ್ವರಿತ ಪರಿಹಾರ ನೀಡುವ ಕಾರ್ಯಕ್ರಮ ಪ್ರಭುವಿನೆಡೆಗೆ ಪ್ರಭುತ್ವ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Dec 26, 2025, 02:15 AM IST
ಗದಗ ನಗರದ ಮುಳಗುಂದ ನಾಕಾದಲ್ಲಿ ಗುರುವಾರ ಪ್ರಪ್ರ ಕಾರ್ಯಕ್ರಮದ 6ನೇ ಎಸ್‌ಒಎಸ್‌ ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ಪ್ರಭುವಿನೆಡೆಗೆ ಪ್ರಭುತ್ವ ಎಂಬ ವಿನೂತನ ಕಾರ್ಯಕ್ರಮವನ್ನು ಗದಗ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದ್ದು, ಪ್ರಜಾಪ್ರಭುತ್ವದ ಆಡಳಿತದಲ್ಲಿ ಪ್ರಜೆಗಳಿಗೆ ತೀವ್ರವಾಗಿ ಸ್ಪಂದಿಸಿ, ಪಾರದರ್ಶಕತೆ ಮೆರೆಯಲು ಗದಗ ನಗರದಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಪ್ರಭುವಿನೆಡೆಗೆ ಪ್ರಭುತ್ವ (ಪ್ರಪ್ರ) ಎಂಬ ವಿನೂತನ ಕಾರ್ಯಕ್ರಮವನ್ನು ಗದಗ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದ್ದು, ಪ್ರಜಾಪ್ರಭುತ್ವದ ಆಡಳಿತದಲ್ಲಿ ಪ್ರಜೆಗಳಿಗೆ ತೀವ್ರವಾಗಿ ಸ್ಪಂದಿಸಿ, ಪಾರದರ್ಶಕತೆ ಮೆರೆಯಲು ಗದಗ ನಗರದಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದ 6ನೇ ಎಸ್‌ಒಎಸ್‌ (ಸೇವ್‌ ಅವರ ಸೋಲ್ಸ್‌) ಲೋಕಾರ್ಪಣೆ ಮಾಡಲಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಮುಳಗುಂದ ನಾಕಾದಲ್ಲಿ ಗುರುವಾರ ಪ್ರಪ್ರ ಕಾರ್ಯಕ್ರಮದ 6ನೇ ಎಸ್‌ಒಎಸ್‌ ಲೋಕಾರ್ಪಣೆಗೊಳಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸಮಸ್ಯೆಗೆ ಪರಿಹಾರ ತ್ವರಿತಗತಿಯಲ್ಲಿ ಆಗಬೇಕು ಎನ್ನುವ ಉದ್ದೇಶದಿಂದ ಪ್ರಭುವಿನೆಡೆಗೆ ಪ್ರಜಾಪ್ರಭುತ್ವ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ದೇಶದ ಪ್ರಜೆಗೆ ಪ್ರಭುವಿನ ಪಟ್ಟ ಇದೆ. ಪ್ರಜೆಗಳನ್ನು ಅಧಿಕಾರಸ್ಥರನ್ನಾಗಿ ಮಾಡಲಾಗುತ್ತಿದ್ದು, ತ್ವರಿತಗತಿಯಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.

ಈ ಕಲ್ಪನೆ ದೇಶದಲ್ಲಿ ಮೊದಲ ಬಾರಿಗೆ ಗದಗ ನಗರದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಹಿಂದಿನ ಅರಸರ ಕಾಲದಲ್ಲಿ ನಾಗರಿಕರಿಗೆ ತೊಂದರೆ ಆದಾಗ ನ್ಯಾಯದ ಗಂಟೆ ಬಾರಿಸಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ ಬಟನ್ ಒತ್ತುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಬಟನ್ ಒತ್ತಿದಾಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನವರು ಮಾಹಿತಿ ಪಡೆದು, ಜನರ ದೂರು ಆಲಿಸಿ ತಕ್ಷಣ ಸಂಬಂಧಿಸಿದವರಿಗೆ ಕಳುಹಿಸಿಕೊಡುತ್ತಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಮಾನ್ಯರು ಅಂಜಿಕೆ, ಭಯ ಇಲ್ಲದೆ ನಿರ್ಭಯವಾಗಿ ಹಾಗೂ ನಿಸ್ಸಂದೇಹದಿಂದ ದೂರು ನೀಡುವ ವಿನೂತನ ವ್ಯವಸ್ಥೆ ಇದಾಗಿದ್ದು, ಇದರಿಂದ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ. ಇದರಿಂದ ದೂರು ನೀಡಿದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ‌. ಈ ಪ್ರಪ್ರ ಮೂಲಕ ಸಾರ್ವಜನಿಕರು ಯಾವುದೇ ನಿರ್ಭಿತಿಯಿಲ್ಲದೇ ಡಿಸಿ, ಎಸ್ಪಿ, ಸಿಇಒ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದರು.

ಇದೇ ವೇಳೆಯಲ್ಲಿ ನಗರದ 16ನೇ ವಾರ್ಡ್ ಪೌರ ಕಾರ್ಮಿಕರಾದ ಮಂಜುಳಾ ದುರಗಪ್ಪ ಬಂಗಿ ಅವರು ಪ್ರಪ್ರ ಮೂಲಕ ತಮಗೆ ಮನೆ ಮಂಜೂರು ಮಾಡಿ ಕೊಡುವಂತೆ ಅಹವಾಲು ಸಲ್ಲಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್ಪಿ ರೋಹನ್ ಜಗದೀಶ, ಪ್ರಭು ಬುರಬುರೆ, ಸಿದ್ದು ಪಾಟೀಲ, ‌ಅಶೋಕ‌ ಮಂದಾಲಿ, ಎಸ್.ಎನ್. ಬಳ್ಳಾರಿ, ಗಂಗಪ್ಪ ಎಂ., ಎ.ಎ. ಕಂಬಾಳಿಮಠ, ರಾಜಾರಾಮ್ ಪವಾರ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ
ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!