ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರೀನೋತ್ಸವ ಫೋರಮ್, ಅನನ್ಯ ಹಾರ್ಟ್ಸ್ ವತಿಯಿಂದ ಮೇ. ೧ರಿಂದ ನಗರದ ಹೊಂಬೇಗೌಡ ಸ್ಮಾರಕ ಲಾ ಕಾಲೇಜು ಕಟ್ಟಡದಲ್ಲಿ ಕೃಷಿಕರ ಕೋಟಾದಡಿ ಬರುವ ಪಿಸಿಎಂಬಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಫೋರಂನ ಸಂಪನ್ಮೂಲ ವ್ಯಕ್ತಿ ಡಾ. ಪ್ರೇಮಾ ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಕೇವಲ ಇಂಜಿನಿಯರಿಂಗ್, ಡಾಕ್ಟರ್‌ಗಳ ಸಂಖ್ಯೆ ಹೆಚ್ಚಾದ ಕಾರಣ ವಿದ್ಯಾರ್ಥಿಗಳ ಒಲವು ಇತರೆ ಕೋರ್ಸ್‌ಗಳತ್ತ ತಿರುಗಿದೆ. ಆದ್ದರಿಂದ ಕೃಷಿ ಕೋಟಾದಡಿ ಬರುವ ರೈತ ಮಕ್ಕಳಿಗೆ ಕೃಷಿ ಮತ್ತು ಕೃಷಿಯೇತರ ವಿಜ್ಞಾನ ಕೋರ್ಸ್‌ಗಳಿಗೆ ಅರ್ಹತೆ ಪಡೆಯಲು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದಲೂ ತರಬೇತಿ ನೀಡಲಾಗುತ್ತಿದ್ದು, ಶೇ.೮೦ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ಫೋರಮ್ ವತಿಯಿಂದ ನೀಡಲಾಗುವ ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನೂ ಎದುರಿಸಿದ್ದು, ಓರ್ವ ವಿದ್ಯಾರ್ಥಿನಿ ರ್‍ಯಾಂಕ್ ಬಂದಿರುತ್ತಾಳೆ. ಅದೇ ರೀತಿ ಕೆಲವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿಕೊಂಡು ಕೆಲಸ ಮಾಡಲು ಸಹ ಮುಂದಾಗಿದ್ದಾರೆ ಎಂದು ವಿವರಿಸಿದರು.ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ವಿಮುಖರಾಗುವರೇ ಹೆಚ್ಚಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಒಮ್ಮೆ ಬಿತ್ತನೆ ಮಾಡಿ ಸ್ವಲ್ಪ ಸಮಯ ನೋಡಿಕೊಂಡರೆ ಸಾಕು, ನಂತರ ಅದರ ಪಾಲನೆ ಮಾಡುವ ಅಗತ್ಯವಿಲ್ಲ. ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಇದೊಂದು ಸೋಮಾರಿ ಬೆಳೆ. ಕಬ್ಬು ಕಟಾವಿಗೆ ಬರುವಷ್ಟರಲ್ಲಿ ಅದಕ್ಕಾಗಿ ಲಕ್ಷಾಂತರ ರು. ಖರ್ಚು ಮಾಡಿರುತ್ತಾರೆ. ಕಾರ್ಖಾನೆಗೆ ಸರಬರಾಜು ಮಾಡಿ ಲಕ್ಷ ಕೈಗೆ ಬಂದರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಇದರಲ್ಲಿ ಲಾಭ ಎಷ್ಟು , ನಷ್ಟ ಎಷ್ಟು, ಶ್ರಮದ ಬಗ್ಗೆಯೂ ಚಿಂತನೆ ಮಾಡುವುದಿಲ್ಲ. ಹೀಗಾಗಿ ಕೃಷಿ ಲಾಭದಾಯಕವಾಗಿಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ ಎಂದರು.
ಕೃಷಿಯನ್ನು ಲಾಭದಾಯಕವಾಗಿಸಲು ನಮ್ಮ ಪ್ರಯತ್ನ:ಕಬ್ಬಿನ ಬೆಳೆಯ ಮಧ್ಯದಲ್ಲಿ ವಿವಿಧ ಬೆಳೆ ಬೆಳೆಯುವ ಮೂಲಕ ಲಾಭ ಮಾಡಿಕೊಳ್ಳಬಹುದು. ಕೇವಲ ಕಬ್ಬನ್ನೇ ನಂಬಿ ಕುಳಿತರೆ ಸಾಲುವುದಿಲ್ಲ. ಬೆಳೆ ಪದ್ಧತಿಯನ್ನು ಮೈಗೂಡಿಸಿಕೊಳ್ಳಬೇಕು. ಭೂಮಿಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಲು ಪ್ರಯತ್ನ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯಗಾರಿಕೆ, ಗೃಹ ವಿಜ್ಞಾನ, ಬಯೋಟೆಕ್ನಾಲಜಿ, ಕೃಷಿ ಮಾರುಕಟ್ಟೆ, ಮೀನುಗಾರಿಕೆ, ಕೃಷಿ ಇಂಜಿನಿಯರಿಂಗ್ ಪದವೀಧರರು ಇರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಬೇತಿ ತರಗತಿಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಅನನ್ಯ ಹಾರ್ಟ್ಸ್‌ನ ಅಧ್ಯಕ್ಷೆ ಅನುಪಮಾ, ಗ್ರೀನೋತ್ಸವ ಫೋರಮ್ ಅಧ್ಯಕ್ಷೆ ಆರತಿ, ಉಪಾಧ್ಯಕ್ಷೆ ನೀತಾ ರೈನಾ ಗೋಷ್ಠಿಯಲ್ಲಿದ್ದರು.